ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಬಗ್ಗೆ ಚರ್ಚಿಸಲು ಇಂದು ಸರ್ವ ಪಕ್ಷ ಸಭೆ ಕರೆಯಲಾಗಿದೆ.
ಮಳೆ ಕೊರತೆಯಿಂದ ತಮಿಳುನಾಡಿನೊಂದಿಗೆ ಕಾವೇರಿ ಜಲವಿವಾದ ಉಂಟಾಗಿರುವ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಸರ್ವ ಪಕ್ಷ ಸಭೆ ಆಯೋಜಿಸಿದ್ದು, ಸಭೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಸ್.ಎಂ. ಕೃಷ್ಣ, ಬಸವರಾಜ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದಗೌಡ ರಾಜ್ಯದ ಸಂಸದರು, ಹಿರಿಯ ವಕೀಲರಿಗೆ ಆಹ್ವಾನ ನೀಡಲಾಗಿದೆ.
ಜಲ ಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ಮಳೆ ಕೊರತೆಯಿಂದ ಕೆ.ಆರ್.ಎಸ್. ಜಲಾಶಯ ಭರ್ತಿಯಾಗಿಲ್ಲವಾದರೂ ತಮಿಳುನಾಡು ಸರ್ಕಾರ ತನ್ನ ಪಾಲಿನ ನೀರು ಹರಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಸಭೆ ಕರೆಯಲಾಗಿದೆ. ಸಭೆಯಲ್ಲಿ ಕೃಷ್ಣಾ ಮತ್ತು ಮಹದಾಯಿ ಬಗ್ಗೆಯೂ ಚರ್ಚೆ ನಡೆಸಲಾಗುವುದು.