ತಿರುವನಂತಪುರಂ: ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಕನಿಚಾರ್, ಮಲೆಯಂಪಾಡಿ ಜನರಲ್ಲಿ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಕನಿಚಾರ್ ನ ಮಲೆಯಂಪಾಡಿ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ವರದಿಯಾಗಿದ್ದು, ಇಲ್ಲಿನ ಎರಡು ಫಾರ್ಮ್ ಗಳಲ್ಲಿ ಇರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಜ್ವರ ಪತ್ತೆಯಾಗಿರುವ ಬಗ್ಗೆ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಮಲೆಯಂಪಾಡಿಯ 10 ಕಿ.ಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ. ಬಳಿಕ ಶಿಷ್ಟಾಚಾರದ ಪ್ರಕಾರ ಹಂದಿಗಳ ಶವಗಳನ್ನು ಹೂಳುವಂತೆ ಸೂಚಿಸಲಾಗಿದೆ.
ಹಂದಿ ಸಾಕಾಣಿಕೆ ಕೇಂದ್ರದ 1 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಸೋಂಕಿತ ಪ್ರದೇಶ ಎಂದು ಘೋಷಿಸಲಾಗಿದೆ. ಅಲ್ಲದೇ 10 ಕೀ.ಮೀ ವ್ಯಾಪ್ತಿಯ ಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಹಂದಿ ಮಾಂಸ ವಿತರಣೆ ಮತ್ತು ಮಾರಾಟವನ್ನು 3 ತಿಂಗಳ ಕಾಲ ನಿಷೇಧಿಸಲಾಗಿದೆ.