
ಬೆಂಗಳೂರು: ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಮನೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಹಲವು ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿರುವುದು ಪತ್ತೆಯಾಗಿದೆ.
ರಾಜ್ಯದ ವಿವಿಧೆಡೆ ನಿನ್ನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಭ್ರಷ್ಟರ ವಿರುದ್ಧ ಸಮರ ಸಾರಿದ್ದರು. ಇದೇ ವೇಳೆ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಮನೆ ಮೇಲೆ ದಾಳಿ ನಡೆಸಿದಾಗ 50 ಲಕ್ಷಕ್ಕೂ ಅಧಿಕ ಹಣ, ಅಪಾರ ಪ್ರಮಾಣದ ಚಿನ್ನಾಭರಣ, ಭೂಸ್ವಾಧೀನದ ನಕಲಿ ದಾಖಲೆಗಳು ಪತ್ತೆಯಾಗಿವೆ.
ತಹಶೀಲ್ದಾರ್ ದಾಖಲೆಗಳ ಜೊತೆ ಅವರ ಮೊಬೈಲ್ ಕೂಡ ವಶಕ್ಕೆ ಪಡೆದುಕೊಂಡಿರುವ ಲೋಕಾಯುಕ್ತರು, ತನಿಖೆ ಮುಂದುವರೆಸಿದ್ದಾರೆ. ದೇವನಹಳ್ಳಿ ಬಳಿ ಕೆಐಡಿಬಿಗೆ ಹೋಗುತ್ತಿರುವ ಜಮೀನುಗಳಲ್ಲಿ ಹಲವು ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಆರ್ ಐ, ವಿಐ ನೀಡಿದ್ರೂ ಉಲ್ಲಂಘಿಸಿ ದಾಖಲೆ ಮಾಡಿ ಅಕ್ರಮ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶಿವರಾಜ್ ಗೆ ಸಂಕಷ್ಟ ಎದುರಾಗಿದೆ.