ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹಾಡಿ ಹೊಗಳಿದ ಬೆನ್ನಲ್ಲೇ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಎಸ್.ಟಿ.ಸೋಮಶೇಖರ್ ನೀಡಿರುವ ಪ್ರತಿಕ್ರಿಯೆ ಇನ್ನಷ್ಟು ಕುತೂಹಲ ಮೂಡಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ನಾನು ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ್ದೆ. ಈ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಪರ ಮಾತನಾಡಿದರೆ ಅದನ್ನೇ ಬೇರೆ ರೀತಿ ಬಿಂಬಿಸಲಾಗುತ್ತಿದೆ. ಬಿಜೆಪಿಯವರೇ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ನಾನು ಕಾಂಗ್ರೆಸ್ ಗೆ ಹೋಗುವುದಿಲ್ಲ, ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಬಿಜೆಪಿಯವರೇ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ನನ್ನನ್ನು ಸೋಲಿಸಲು ಆಡಿಯೋ ವೈರಲ್ ಮಾಡಿದರು. ಮೂಲ ಬಿಜೆಪಿಗರು ನನ್ನ ವಿರುದ್ಧ ಕೆಲಸ ಮಾಡಿದರು. ಇದನ್ನು ನೋಡಿದರೆ ಬಿಜೆಪಿಯವರೇ ನನ್ನನ್ನು ಕಾಂಗ್ರೆಸ್ ಗೆ ಕಳುಹಿಸುವಂತಿದೆ ಎಂದರು.
ನಾನು ಕಾಂಗ್ರೆಸ್ ಗೆ ಹೋಗುವ ಬಗ್ಗೆ ಎಲ್ಲಿ ಇಯೂ ಹೇಳಿಲ್ಲ, ನಮ್ಮ ಕಾರ್ಯಕರ್ತರ ಜೊತೆಗೂ ಹೇಳಿಕೊಂಡಿಲ್ಲ. ಸ್ಥಳೀಯವಾಗಿ ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸವಾಗುತ್ತಿದೆ ಎಂದು ಕಿಡಿಕಾರಿದರು.