ಬೆಂಗಳೂರು : ನಾಳೆಯಿಂದ 3 ದಿನ ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜಿಲ್ಲಾವಾರು ಸಭೆ ನಡೆಸಲಿದ್ದಾರೆ.
3 ದಿನಗಳ ಕಾಲ ಸತತ ಸಭೆ ನಡೆಸಲಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಕಾಂಗ್ರೆಸ್ ಶಾಸಕರ ದೂರು ದುಮ್ಮಾನ ಆಲಿಸಲಿದ್ದಾರೆ. ಸಭೆ ಮೊದಲ ದಿನ 6 ಜಿಲ್ಲೆ 31 ಶಾಸಕರು, ಸಚಿವರ ಜತೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರು ತಮ್ಮ ಮಾತಿಗೆ ಯಾವುದೇ ಕಿಮ್ಮತ್ತು ನೀಡದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ತಾವೇ ಸಿಎಂ ಖುದ್ದಾಗಿ ಶಾಸಕರ ಜೊತೆ ಸಭೆ ನಡೆಸಿ ಅಹವಾಲು ಸ್ವೀಕರಿಸಲಿದ್ದಾರೆ. ಅಲ್ಲದೇ ಅಸಮಾಧಾನಗೊಂಡ ಶಾಸಕರು ಸಚಿವರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ವಿಚಾರ ಕೂಡ ರಾಜ್ಯ ರಾಜಕೀಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು.ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಸಭೆ ನಡೆಯಲಿದೆ.