ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ದಿನಸಿ, ತರಕಾರಿ ದರ ಗಗನಕ್ಕೇರತೊಡಗಿದೆ.
ಟೊಮೆಟೊ ದರ ಹೊಸ ದಾಖಲೆ ಬರೆದಿದೆ. ಆಲೂಗಡ್ಡೆ ಹೊರತಾಗಿ ಅಡುಗೆ ಮನೆಯ ಬಹುತೇಕ ಆಹಾರ ಪದಾರ್ಥಗಳ ಬೆಲೆ ಭಾರಿ ಏರಿಕೆ ಕಂಡಿದೆ. ತೊಗರಿ ಬೆಳೆ ದರ ಶೇಕಡ 28 ರಷ್ಟು, ಅಕ್ಕಿ ದರ ಶೇಕಡ 10.5 ರಷ್ಟು, ಉದ್ದಿನ ಬೇಳೆ ದರ ಶೇಕಡ 8ರಷ್ಟು ಏರಿಕೆಯಾಗಿದ್ದು, ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ ಬೆಲೆ ಏರಿಕೆ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದೆ.
ಅಕ್ಕಿ ಚಿಲ್ಲರೆ ದರ ಸರಾಸರಿ 37 ರೂ. ಇದ್ದು, ಈಗ 41 ರೂಪಾಯಿಗೆ ಏರಿಕೆ ಕಂಡಿದೆ. ತೊಗರಿ ಬೇಳೆ ಒಂದು ಕೆಜಿ 106.5 ರೂ. ಇದ್ದು, ಈಗ 136 ರೂಪಾಯಿಗೆ ಏರಿಕೆ ಕಂಡಿದೆ. ಉದ್ದಿನಬೇಳೆ 106.5 ರೂ.ನಿಂದ 114 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ದರ ಕಳೆದ ವರ್ಷದಿಂದ ಶೇಕಡ 5ರಷ್ಟು ಹೆಚ್ಚಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಸೇರಿ ಹಲವು ಕಾರಣಗಳಿಂದ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.