ಬೆಂಗಳೂರು : ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ಚುನಾವಣೆಗೂ ಮುನ್ನ ನಂದಿನಿಯನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಇಂದು ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ. ನಂದಿನಿಗೆ ರಾಜಕೀಯ ಸ್ಪರ್ಶ ನೀಡಿದ ಪರಿಣಾಮ ಕೇರಳ ಮಾರುಕಟ್ಟೆಯನ್ನು ನಂದಿನಿ ಈಗಾಗಲೇ ಕಳೆದುಕೊಂಡಿದೆ. ಇದೀಗ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ ಎಂದು ಹೇಳಿದೆ.
ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರಕ್ಕೆ ಬಂದಾಗ ಲಾಭ-ನಷ್ಟದ ಲೆಕ್ಕ ಹೇಳುವ ಕಾಂಗ್ರೆಸ್ ಇದೇ ಸೂತ್ರವನ್ನು ಇತರ ಧರ್ಮಗಳಿಗೆ ಅನ್ವಯಿಸಲು ಒಪ್ಪುವುದಿಲ್ಲ. ಹಿಂದೂಗಳೆಡೆಗೆ ತಾತ್ಸಾರ ತಮ್ಮ ಜಾತ್ಯಾತೀತ ಸೂತ್ರ ಎಂಬುದನ್ನು ಸಿದ್ದರಾಮಯ್ಯ ಅವರು ಈಗ ಮತ್ತೆ ರುಜುವಾತು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.