ಚಿಕ್ಕಮಗಳೂರು: ಕೆಂಪುಸುಂದರಿ ಟೊಮೆಟೊ ಮತ್ತೆ ತನ್ನ ಬೆಲೆ ಏರಿಸಿಕೊಂಡಿದ್ದಾಳೆ. ಟೊಮೆಟೊ ದರದಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕಾಫಿ ನಾಡಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಗಿದೆ.
ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಟೊಮೆಟೊ ದರ ಗಗನಕ್ಕೇರಿದ್ದು, 200 ರೂಪಾಯಿ ಗಡಿ ತಲುಪಿದೆ. 26 ಕೆ.ಜಿ.ಟೊಮೆಟೊ 5000 ರೂಪಾಯಿಗೆ ಹರಾಜಾಗಿದೆ. ಟೊಮೆಟೊ ಕೊಳ್ಳಲು ಮಾರುಕಟ್ಟೆಗೆ ಹೋದ ಗ್ರಾಹಕರು ಬೆಲೆ ಏರಿಕೆ ಕಂಡು ಶಾಕ್ ಆಗಿದ್ದಾರೆ.
ಇಷ್ಟಕ್ಕೂ ಕಾಫಿ ನಾಡಿನಲ್ಲಿ ಟೊಮೆಟೊ ಬೆಲೆ ಈ ಪರಿ ಏರಿಕೆಯಾಗಲು ಕಾರಣ ಉತ್ತರ ಭಾರತದಲ್ಲಿ ಚಿಕ್ಕಮಗಳೂರಿನ ಟೊಮೆಟೊಗೆ ಭಾರಿ ಬೇಡಿಕೆ. ಇಲ್ಲಿ ಬೆಳೆದ ಟೊಮೆಟೊ ಉತ್ತರ ಭಾರತಕ್ಕೆ ಸಾಗಾಟವಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ.
ಇನ್ನು ಬೆಂಗಳೂರಿನಲ್ಲಿಯೂ ಟೊಮೆಟೊ ದರ ಏರಿಕೆಯಾಗಿದ್ದು, ಕೆ.ಜಿ.ಟೊಮೆಟೊಗೆ 150 ರಿಂದ 160 ರೂಪಾಯಿ ಆಗಿದೆ. ಟೊಮೆಟೊ ದರದಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.