ಬೆಳಗಾವಿ: ಮುಸ್ಲಿಂರೇ ಇಲ್ಲದ ಈ ಗ್ರಾಮದಲ್ಲಿ ಹಿಂದೂಗಳೇ ಮೊಹರಂ ಹಬ್ಬ ಆಚರಿಸಿ ಭಾವೈಕ್ಯತೆಯನ್ನು ಮೆರೆದಿರುವ ವಿಶೇಷ ಘಟನೆ ಗಡಿ ಜಿಲ್ಲೆ ಬೆಳಗಾವಿಯ ಹರ್ಲಾಪುರದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹರ್ಲಾಪುರ ಎಂಬ ಪುಟ್ಟ ಗ್ರಾಮದಲ್ಲಿ ಹಿಂದೂಗಳೇ ಮೊಹರಂ ಆಚರಣೆ ಮಾಡಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ವರ್ಷದ ಆರಂಭವನ್ನು ಸೂಚಿಸುವ ಈ ದಿನಗಳು ಮುಸ್ಲಿಂರಿಗೆ ದು:ಖ, ಶೋಕದ ದಿನ. ಮುಸ್ಲಿಂ ಬಂಧುಗಳೆ ಇಲ್ಲ ಹರ್ಲಾಪುರ ಗ್ರಾಮದಲ್ಲಿ ಹಿಂದೂಗಳೆ ಮೊಹರಂ ಆಚರಿಸಿ ಪಂಜಾಗಳಿಗೆ ಪೂಜೆ ಸಲ್ಲಿಸುತ್ತಾರೆ.
ಭಾವೈಕ್ಯತೆಗೆ ಹೆಸರಾದ ಈ ಊರಿನಲ್ಲಿ ಹಿಂದೂಗಳೆ ತಮ್ಮ ಸ್ವಂತ ಹಣದಿಂದ ಫಕೀರಸ್ವಾಮಿ ದರ್ಗಾ ಕಟ್ಟಿದ್ದಾರೆ. ಅಲ್ಲಿ ಪಂಜಾಗಳನ್ನು ನಿರ್ಮಿಸಿ ಪೂಜಿಸುತ್ತಾರೆ. ಪಂಜಾ ಕೂರಿಸುವುದು, ಡೋಲಿಗಳನ್ನು ಸಿದ್ಧಪಡಿಸುವುದು, ಮೊಹರಂ ಕೊನೆದಿನದಂದು ಅವುಗಳ ಮೆರವಣಿಗೆ ಮಾಡುವುದು ಹೀಗೆ ಎಲ್ಲಾ ವಿಧಿವಿಧಾನಗಳನ್ನೂ ಹಿಂದುಗಳೆ ಮಾಡುತ್ತಾರೆ ಎಂಬುದು ವಿಶೇಷ.
ಇಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಗ್ರಾಮಸ್ಥರು ಹೇಳುವ ಪ್ರಕಾರ ಇಲ್ಲಿ ಹಿಂದೆ ಫಕೀರರೊಬ್ಬರು ವಾಸವಾಗಿದ್ದರು. ಅವರು ಪ್ರತಿ ದಿನ ನಾಲ್ಕು ದೇವರಿಗೆ ಪೂಜೆ ನೆರವೇರಿಸುತ್ತಿದ್ದರು. ಅವರ ನಿಧನದ ಬಳಿಕ ಇದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿ ಘೋರಿ ಕಟ್ಟಲಾಯಿತು. ಅದಕ್ಕೆ ಹೊಂದಿಕೊಂಡು ದರ್ಗಾವನ್ನೂ ನಿರ್ಮಿಸಲಾಗಿದೆ. ಅಲ್ಲಿ ಪ್ರತಿ ವರ್ಷ ಪಂಜಾಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅಲ್ಲದೇ ಇಲ್ಲಿನ ದರ್ಗಾದಲ್ಲಿ ಸರ್ವಧರ್ಮಿಯ ಮಹಾತ್ಮರ ಭಾವಚಿತ್ರಗಳನ್ನು ಹಾಕಲಾಗಿದೆ. ದರ್ಗಾದ ಆವರಣದಲ್ಲಿ ಬೇವಿನ ಮರವಿದ್ದು, ಹಾವು ಕಡಿತಕ್ಕೆ ಈ ಬೇವಿನ ಮರದ ಎಲೆಗಳ ರಸ ಔಷಧಿಯಾಗಿದೆ. ಹೂಲಿಯಿಂದ ಯಲ್ಲಮ್ಮನ ಗುಡ್ಡಕ್ಕೆ ಸಂಚರಿಸುವ ಭಕ್ತರು ಈ ದರ್ಗಾಕ್ಕೆ ಭೇಟಿ ಕೊಡುವುದು ರೂಢಿ. ಇಲ್ಲಿ ಪ್ರತಿ ವರ್ಷ ಮೊಹರಂ ಆಚರಣೆಯನ್ನು ಹಿಂದೂಗಳೇ ಮಾಡುತ್ತಾರೆ ಈ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಲಾಗುತ್ತದೆ ಎಂದು ತಿಳಿಸಿದ್ದಾರೆ.