ಬೆಂಗಳೂರು: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಳೆ ಹಾನಿ ಸಂಬಂಧ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ನಂತರ ಅವರು ಮಾಹಿತಿ ನೀಡಿದ್ದಾರೆ.
21 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದೆ. ಆರು ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಜೂನ್ 1ರಿಂದ ಇದುವರೆಗೆ 38 ಜನ ಸಾವನ್ನಪ್ಪಿದ್ದು, 35 ಜನ ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಮಳೆಯಿಂದ 57 ಮನೆ ಸಂಪೂರ್ಣವಾಗಿ ಹಾನಿಯಾಗಿವೆ, 2682 ಮನೆಗಳು ಭಾಗಶಃ ಹಾನಿಯಾಗಿದ್ದು, 105 ಜಾನುವಾರು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
549.39 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 185 ಹೆಕ್ಟರ್ ಪ್ರದೇಶದಲ್ಲಿ ಕೃಷಿ ಬೆಳೆ, 356 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಮಳೆಯಿಂದ 417 ಕಿಮೀ ರಾಜ್ಯ ಹೆದ್ದಾರಿ, 425 ಕಿಮೀ ಜಿಲ್ಲಾ ಹೆದ್ದಾರಿ, 1277 ಕಿಮೀ ಗ್ರಾಮೀಣ ರಸ್ತೆಗಳು ಹಾನಿಗೀಡಾಗಿವೆ. 189 ಸೇತುವೆ, 889 ಶಾಲಾ ಕೊಠಡಿ, 8 ಪ್ರಾಥಮಿಕ ಕೇಂದ್ರ, 269 ಅಂಗನವಾಡಿ ಕೇಂದ್ರಗಳು ಹಾನಿಯಾಗಿರುವುದು ವರದಿಯಾಗಿದೆ. 11,995 ವಿದ್ಯುತ್ ಕಂಬ, 894 ಟ್ರಾನ್ಸ್ ಫಾರ್ಮರ್, 215 ಕಿಮೀ ಉದ್ದದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.