ಮಂಗಳೂರು: ಮುಂದಿನ ವರ್ಷ ತಜ್ಞರ ಸಮಿತಿ ವರದಿ ಅನ್ವಯ ಪಠ್ಯ ಪರಿಷ್ಕರಣೆ ಮಾಡಲಿದ್ದು, ಸಂಪೂರ್ಣವಾಗಿ ಪಠ್ಯ ಬದಲಾವಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ತುರ್ತಾಗಿ ಪಠ್ಯಪುಸ್ತಕದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತಜ್ಞರ ಸಮಿತಿ ಮೂಲಕ ಪೂರ್ಣವಾಗಿ ಪಠ್ಯಪರಿಷ್ಕರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪಠ್ಯದಲ್ಲಿ ಬದಲಾವಣೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಪಡೆದು ಅವರ ಸಹಕಾರದಿಂದ ಪಠ್ಯಪರಿಷ್ಕರಣೆ ನಡೆಸಲಾಗುತ್ತದೆ. ಮಕ್ಕಳಿಗೆ ಉತ್ತಮ ತಿಳಿವಳಿಕೆಯ ಪಠ್ಯ ಇರಬೇಕೆಂಬ ಉದ್ದೇಶದಿಂದ ಪಠ್ಯಪುರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ 13,500 ಶಾಲಾ ಶಿಕ್ಷಕರ ನೇಮಕಾತಿ ಕೈಗೊಳ್ಳಲಿದ್ದು, ನೇಮಕಾತಿ ವಿಚಾರ ಕೋರ್ಟ್ ನಲ್ಲಿ ಇರುವುದರಿಂದ ಪ್ರಕ್ರಿಯೆ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.