ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ದರ ಪರಿಷ್ಕರಣೆ ಸಂಬಂಧ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆರಂಭವಾಗಿದೆ.
ಪಶು ಸಂಗೋಪನಾ ಇಲಾಖೆ ಸಚಿವ ಕೆ. ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್, ಕೆಎಂಎಫ್ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
ಪ್ರತಿ ಲೀಟರ್ ಹಾಲಿನ ದರ 5 ರೂಪಾಯಿ ಹೆಚ್ಚಳ ಮಾಡುವಂತೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಿದ್ದು, 5 ರೂಪಾಯಿ ಬದಲಿಗೆ 3 ರೂ. ಹೆಚ್ಚಳಕ್ಕೆ ಸರ್ಕಾರ ಸಮ್ಮತಿ ನೀಡುವ ಸಾಧ್ಯತೆ ಇದೆ. ಅಥವಾ ಸದ್ಯಕ್ಕೆ ಹಾಲಿನ ದರ ಹೆಚ್ಚಳ ಬೇಡವೆಂದು ಸಿಎಂ ಹೇಳಬಹುದು. ಹಾಲು ಒಕ್ಕೂಟದ ನಷ್ಟ ಸರಿದೂಗಿಸಲು ದರ ಹೆಚ್ಚಳಕ್ಕೆ ಸಮ್ಮತಿ ಕೂಡ ನೀಡಬಹುದು. ಹೀಗಾಗಿ ಸಿಎಂ ನೇತೃತ್ವದಲ್ಲಿ ಕೆಎಂಎಫ್ ಹಾಲಿನದ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಡೆದಿರುವ ಸಭೆ ತೀವ್ರ ಕುತೂಹಲ ಮೂಡಿಸಿದೆ. ಕೆಲವೇ ಕ್ಷಣಗಳಲ್ಲಿ ದರ ಹೆಚ್ಚಳ ಕುರಿತಾದ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.