Gruha Lakshmi Scheme : ‘ಗೃಹಲಕ್ಷ್ಮಿ’ ಗೂ ಕಾಡಿದ ಸರ್ವರ್ ಸಮಸ್ಯೆ : ಅರ್ಜಿ ಸಲ್ಲಿಸಲು ಮಹಿಳೆಯರ ಪರದಾಟ

ಬೆಂಗಳೂರು : ಮನೆಯ ಯಜಮಾನಿಯರಿಗೆ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಹಲವಡೆ ಸರ್ವರ್ ಸಮಸ್ಯೆ ಎದುರಾಗಿದ್ದು, ಮಹಿಳೆಯರು ಪರದಾಡುವಂತಾಗಿದೆ.

ಹೌದು, ಗೃಹಲಕ್ಷ್ಮಿ’ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಸರ್ವರ್ ಸಮಸ್ಯೆ ಕಾಡಿದೆ. ಮೊಬೈಲ್ ಗಳಿಗೆ ಸಂದೇಶ ಬಾರದಿದ್ದರೂ ಬೆಂಗಳೂರು ಒನ್ ಕೇಂದ್ರಗಳಿಗೆ ಬಂದು ಮಹಿಳೆಯರು ಪರದಾಡಿದರು. ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳು, ಕರ್ನಾಟಕ ಒನ್ ಮತ್ತು ಗೃಹಲಕ್ಷ್ಮೀ ಯೋಜನೆ ನೊಂದಣಿ ಸೇವಾ ಕೇಂದ್ರಗಳಳಲ್ಲಿ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆಯಾಗುತ್ತಿದ್ದು, ಮಹಿಳೆಯರು ನಿನ್ನೆ ಬೆಳಗ್ಗೆಯಿಂದ ಕಾದು ಕಾದು ಸಾಕಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 19 ರಂದು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಚಾಲನೆ ನೀಡಿದ್ದು, ಆದರೆ ರಾಜ್ಯಾದ್ಯಂತ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆಯಾಗುತ್ತಿದೆ. ಬೆಂಗಳೂರು, ಮೈಸೂರು, ಹಾವೇರಿ, ಬೀದರ್, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆಯಾಗುತ್ತಿದ್ದು, ಮಹಿಳೆಯರು ಅರ್ಜಿ ಸಲ್ಲಿಸಲು ಪರದಾಟ ನಡೆಸಿದ್ದಾರೆ.
ಪಡಿತರ ಚೀಟಿಯಲ್ಲಿ “ಯಜಮಾನಿ ಮಹಿಳೆ” ಎಂದು ಗುರುತಿಸಿರುವ ಮಹಿಳೆ ಇದಕ್ಕೆ ಅರ್ಹರಾಗಿದ್ದಾರೆ. ಆದರೆ ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿದಾರರಾಗಿದಲ್ಲಿ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಇನ್ನು ಲಿಂಗತ್ವ ಅಲ್ಪಸಂಖ್ಯಾತರು ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ.

ಫಲಾನುಭವಿ ನೊಂದಣಿ ಪ್ರಕ್ರಿಯೆ ಎರಡು ವಿಧಾನದ ಮೂಲಕ ಮಾಡಲಾಗುತ್ತಿದೆ. ಮೊದಲನೇಯದಾಗಿ ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಯ ಮೋಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೊಂದಣಿ ಕೇಂದ್ರದ ವಿವರಗಳನ್ನು ಎಸ್.ಎಂ.ಎಸ್. ಮೂಲಕ ತಿಳಿಸಲಾಗುತ್ತದೆ. ಇದಲ್ಲದೆ ಟೋಲ್ ಫ್ರೀ ಸಂಖ್ಯೆ 1902ಗೆ ಕಾಲ್ ಮಾಡಿ ಅಥವಾ 8147500500 ಮೋಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮೂಲಕ ಸಂದೇಶ ಕಳುಹಿಸಿ ನೋಂದಣಿ ಕುರಿತು ಮಾಹಿತಿ ಪಡೆಯಬಹುದಾಗಿದೆ.
ನಂತರ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಕರ್ನಾಟಕ ಒನ್, ವಾರ್ಡ ಕಛೇರಿ, ಸ್ಥಳಿಯ ನಗರಾಡಳಿತ ಸಂಸ್ಥೆಯ ಕಛೇರಿ, ಗೃಹಲಕ್ಷ್ಮೀ ನೋಂದಣಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಇನ್ನು ಎರಡನೇ ವಿಧಾನವಾಗಿ “ಪ್ರಜಾಪ್ರತಿನಿಧಿ” (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಕರು) ಫಲಾನುಭವಿಗಳ ಮನೆಗೆ ಭೇಟಿ ನೀಡಲಿದ್ದು, ಅವರಿಂದಲೂ ಸಹ ಸ್ಥಳದಲ್ಲಿಯೇ ನೊಂದಾಯಿಸಿಕೊಳ್ಳಬಹುದಾಗಿದೆ. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೆ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read