ಬೆಂಗಳೂರು: ಕೋಲಾರ ಜಿಲ್ಲೆಯ ವೇಮಗಲ್ ಬಾವನಹಳ್ಳಿ ಸಮೀಪ 720 ಎಕರೆ ಪ್ರದೇಶದಲ್ಲಿ ಹೈಟೆಕ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲು ಜಪಾನ್ ಮೂಲದ ಮಾರುಬೇನಿ ಕಾರ್ಪೊರೇಷನ್ ಮುಂದಾಗಿದೆ.
ಸುಮಾರು 10000 ಕೋಟಿ ರೂ. ಹೂಡಿಕೆ ಮಾಡಲಿದ್ದು, 40,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕಂಪನಿಯ ನಿಯೋಗದ ಪ್ರತಿನಿಧಿಗಳು ಹೇಳಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ನಿಯೋಗ ಚರ್ಚೆ ನಡೆಸಿದೆ. ಈ ಕುರಿತು ವಿವರವಾಗಿ ಅಧ್ಯಯನ ಮಾಡಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಹೈಟೆಕ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ನೇರವಾಗಿ 2800 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ನಂತರ ಕೈಗಾರಿಕಾ ನಿವೇಶನಗಳನ್ನು ಆಸಕ್ತ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ನೇರ ವಿದೇಶಿ ಹೂಡಿಕೆ ಮೂಲಕ 8,000 ಕೋಟಿ ರೂ. ಹರಿದು ಬರಲಿದೆ. 40,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ರಾಜ್ಯದ ಆರ್ಥಿಕತೆಗೆ ವಾರ್ಷಿಕ ಎರಡು ಬಿಲಿಯನ್ ಡಾಲರ್ ಸೇರ್ಪಡೆಯಾಗಲಿದೆ ಎಂದು ಕಂಪನಿ ಪ್ರಾತ್ಯಕ್ಷಿಕೆ ತೋರಿಸಿದೆ.
ಸುಮಾರು 65 ದೇಶಗಳಲ್ಲಿ ತಮ್ಮ ವಾಣಿಜ್ಯ ವಹಿವಾಟನ್ನು ಹೊಂದಿರುವ ಜಪಾನ್ ದೇಶದ ಪ್ರಮುಖ ಕಂಪನಿಯಾದ ಮಾರುಬೇನಿ ಕಾರ್ಪೊರೇಷನ್ ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯಮ ಸ್ಥಾಪನೆಗೆ ಆಸಕ್ತಿ ತೋರಿದೆ. ಸಂಸ್ಥೆಯ ಉನ್ನತ ಪ್ರತಿನಿಧಿಗಳು ಭೇಟಿಮಾಡಿ ನೂತನ ತಂತ್ರಜ್ಞಾನದ ಕೈಗಾರಿಕಾ ಪಾರ್ಕ್ ಸ್ಥಾಪನೆ ಕುರಿತು ಚರ್ಚಿಸಿದರು. ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಉದ್ಯೋಗ ಸೃಷ್ಟಿ ಮಾಡಿ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.