ಭಾರತದ 18 ವರ್ಷದ ಸೂಪರ್ ಸ್ಕೇಟರ್ ಸೃಷ್ಟಿ ಧರ್ಮೇಂದ್ರ ಶರ್ಮಾ 50 ಮೀಟರ್ಗಿಂತಲೂ ಅಧಿಕ ದೂರದವರೆಗೆ ಲಿಂಬೋ ಸ್ಕೇಟಿಂಗ್ ಮಾಡುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
2021ರಲ್ಲಿ 7.38 ಸೆಕೆಂಡು ದೂರ ಕ್ರಮಿಸಿ ಲಿಂಬೋ ಸ್ಕೇಟಿಂಗ್ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ಸೃಷ್ಟಿ ಇದೀಗ ತಮ್ಮದೇ ದಾಖಲೆಯನ್ನು ಮುರಿಯುವ ಮೂಲಕ ಹೊಸ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಅಂದಹಾಗೆ ಸೃಷ್ಟಿ 2015ರಿಂದಲೂ ತಮ್ಮದೇ ಗಿನ್ನೆಸ್ ದಾಖಲೆಯನ್ನು ಮುರಿಯುತ್ತಾ ಬಂದಿದ್ದಾರೆ.
ಈ ಬಾರಿ ಸೃಷ್ಟಿ 6.94 ಸೆಕೆಂಡುಗಳಲ್ಲಿ ಲಿಂಬೋಸ್ಕೇಟಿಂಗ್ ಮಾಡಿ ಮುಗಿಸುವ ಮೂಲಕ ಈ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಈ ಕ್ರೀಡೆಯಲ್ಲಿ ಭೂಮಿಯಿಂದ ಕೇವಲ 30 ಸೆಂಟಿ ಮೀಟರ್ ಎತ್ತರದಲ್ಲಿ ಕಂಬಗಳನ್ನು ಅಡ್ಡಲಾಗಿ ಇಡಲಾಗುತ್ತದೆ.
ಲಿಂಬೋ ಸ್ಕೇಟಿಂಗ್ ಮಾಡುವ ಸ್ಪರ್ಧಿಯು ಕಾಲುಗಳನ್ನು ಅಗಲ ಮಾಡಿ ದೇಹವನ್ನು ಸಂಪೂರ್ಣ ಬಾಗಿಸಬೇಕು. ಕೈಗಳು ಪಾದದ ಮೇಲೆ ಇರಬೇಕು. ನೆಲಕ್ಕೂ ದೇಹ ತಾಗದೇ ಇತ್ತ ಕಂಬಕ್ಕೂ ದೇಹವನ್ನು ತಾಗಿಸಿದೇ ಬಾಗಿಕೊಂಡೇ ಸ್ಕೇಟಿಂಗ್ ಮಾಡಬೇಕು. ಈ ಕಠಿಣವಾದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸೃಷ್ಟಿ ವಿಶ್ವ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ.