ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರಿಂದ ಅಧಿಕಾರ ಸ್ವೀಕರಿಸಿದರು.
ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾದ ಇವರು ಮಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದು, ಮಂಗಳೂರು ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಚಿತ್ರದುರ್ಗದಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿಯಾಗಿ, ಮೈಸೂರು ಕಾರ್ಪೋರೇಷನ್ ಕೌನ್ಸಿಲ್ ಕಾರ್ಯದರ್ಶಿ, ಹುಣಸೂರು ಉಪವಿಭಾಗಾಧಿಕಾರಿ, ಮೈಸೂರು ಮುಡಾ ಕಾರ್ಯದರ್ಶಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ, ಕೆ.ಎಸ್.ಟಿ.ಡಿ.ಸಿ ಜನರಲ್ ಮ್ಯಾನೇಜರ್, ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತೆ, ಕೋಲಾರ ಹೆಚ್ಚುವರಿ ಜಿಲ್ಲಾಧಿಕಾರಿ, ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ವಿಭಾಗದ ಅಪರ ಪ್ರಾದೇಶಿಕ ಆಯುಕ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ.
2020 ರಲ್ಲಿ ಹಂಪಿ ವಿವಿ ಯಿಂದ ಡಾಕ್ಟರೇಟ್ ಪಡೆದಿದ್ದು, 2021 ರಲ್ಲಿ ಐಎಎಸ್ ಅಧಿಕಾರಿಯಾಗಿ ಭಡ್ತಿ ಹೊಂದಿ, ತುಮಕೂರು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.