ಕೊಪ್ಪಳ: ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ತನಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಸ್ಟಾಫ್ ನರ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಹಿರೆಸಿಂದೋಗಿ ಗ್ರಾಮದ ಸಮೂದಾಯ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಮೂಲಿಮನಿ, ಸ್ಟಾಫ್ ನರ್ಸ್ ಅಮಿನಾ ಬೇಗಂ ಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಸ್ವತ: ಸ್ಟಾಫ್ ನರ್ಸ್ ಅಮಿನಾ ಬೇಗಂ ಅಳವಂಡಿ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದಾರೆ.
ತನಗೆ ವೈದ್ಯ ರಮೇಶ್ ಕಿರುಕುಳ ನೀಡುತ್ತಿದ್ದ ಬಗ್ಗೆ ಅಮಿನಾ ಬೇಗಂ ತನ್ನ ಪತಿಗೆ ಹೇಳಿದ್ದರು. ಈ ವಿಷಯ ತಿಳಿದ ವೈದ್ಯ ರಮೇಶ್ ಇನ್ನಷ್ಟು ಕಿರುಕುಳ ನೀಡಲು, ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ. ಸಂಸಾರ ಒಡೆಯುತ್ತೇನೆ. ಗಂಡ-ಹೆಂಡತಿಯನ್ನು ಬೇರ್ಪಡಿಸುತ್ತೇನೆ ಎಂದು ಆವಾಜ್ ಹಾಕಿದ್ದಾನೆ. ಅಲ್ಲದೇ ಸ್ಟಾಫ್ ನರ್ಸ್ ಗೆ 2 ತಿಂಗಳಿಂದ ಸಂಬಳವನ್ನೂ ನೀಡಿಲ್ಲ. ಕೇಳಲು ಹೋದ ಅಮಿನಾ ಪತಿಯ ವಿರುದ್ಧ ದೂರು ನೀಡಿ ಜೈಲಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ವೈದ್ಯನ ಕಿರುಕುಳಕ್ಕೆ ಬೇಸತ್ತ ಸ್ಟಾಫ್ ನರ್ಸ್ ಅಮಿನಾ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೈದ್ಯ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 354, 04, 506 ಅಡಿ ಕೇಸ್ ದಾಖಲಾಗಿದೆ.