ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸುವ ನಿರ್ಮಾಣ ಕಾಮಗಾರಿಗಳ ಮೊತ್ತ ಮಿತಿಯನ್ನು 50 ಲಕ್ಷ ರೂ.ನಿಂದ ಒಂದು ಕೋಟಿ ರೂಪಾಯಿಗೆ ಹೆಚ್ಚಳ ಮಾಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.
ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳು ಕೈಗೊಳ್ಳಲಾದ ನಿರ್ಮಾಣ ಕಾಮಗಾರಿಗಳ ಮೊತ್ತವನ್ನು 50 ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ಗೆ ಹೆಚ್ಚಳ ಮಾಡಲು ವಿಧಾನಸಭೆ ಅಂಗೀಕಾರ ನೀಡಿದೆ.
ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ವಿಧೇಯಕ ಮಂಡಿಸಿದ್ದು, ಧ್ವನಿ ಮತದ ಮೂಲಕ ಅಂಗೀಕಾರ ನೀಡಲಾಗಿದೆ. ಪರಿಶಿಷ್ಟ ಗುತ್ತಿಗೆದಾರರಿಗೆ 50 ಲಕ್ಷ ರೂ.ವರೆಗಿನ ಕಾಮಗಾರಿಗೆ ಈ ಹಿಂದೆ ನಮ್ಮ ಸರ್ಕಾರವೇ ಮೀಸಲಾತಿ ಕಲ್ಪಿಸಿತ್ತು. ಮೊದಲ ಟೆಂಡರ್ ಕರೆಯಲ್ಲಿ ಶೇಕಡ 60ರಷ್ಟು, ಎರಡನೇ ಟೆಂಡರ್ ಕರೆಯಲ್ಲಿ ಶೇಕಡ 82 ರಷ್ಟು ಮಂದಿ ಪರಿಶಿಷ್ಟ ಗುತ್ತಿಗೆದಾರರು ಭಾಗವಹಿಸುತ್ತಿದ್ದಾರೆ. ಈಗ ಕಾಮಗಾರಿ ಮಿತಿಯನ್ನು ಒಂದು ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಿದ್ದು, ಸಾಮಾಜಿಕ ನ್ಯಾಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಕಳೆದ ಬಾರಿ ಮಂಡಿಸಿದ ಬಜೆಟ್ ನಲ್ಲಿ ನಾನು ಇದೇ ವಿಚಾರವನ್ನು ಘೋಷಿಸಿದ್ದೆ. ಸರ್ಕಾರ ಕಾಮಗಾರಿ ಮೊತ್ತದ ಮಿತಿ ಹೆಚ್ಚಳಕ್ಕೆ ತಿದ್ದುಪಡಿ ಮಾಡಿ ವಿಧೇಯಕ ಮಂಡಿಸಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.