ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಪೊದೆಗಳಲ್ಲಿ ಬಿಸಾಡಿದ 1 ವರ್ಷದ ಹೆಣ್ಣು ಮಗು ಪತ್ತೆಯಾಗಿದೆ.
ಮೊರಾದಾಬಾದ್ ಜಿಲ್ಲೆಯ ಮಜೋಲಾ ಪಟ್ಟಣದಲ್ಲಿ ಪೊದೆಯಲ್ಲಿ ಒಂದು ವರ್ಷದ ಹೆಣ್ಣು ಮಗುವನ್ನು ಎಸೆದಿರುವುದು ಕಂಡು ಬಂದಿದೆ. ಮಜೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಡಿಪಿಎಸ್ ಶಾಲೆಯ ಬಳಿಯ ಪೊದೆಯಲ್ಲಿ ಮಗು ಪತ್ತೆಯಾಗಿದೆ. ಸಮೀಪದ ಕಾರ್ಖಾನೆಯ ವಾಚ್ ಮ್ಯಾನ್ ತಡರಾತ್ರಿ ತನ್ನ ಬೈಸಿಕಲ್‌ನಲ್ಲಿ ಆ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಕುರುಚಲು ಗಿಡದಲ್ಲಿ ಎಲ್ಲಿಂದಲೋ ಮಗುವಿನ ಅಳು ಬರುತ್ತಿರುವುದನ್ನು ಗಮನಿಸಿದ್ದಾರೆ.
ಆತ ಕೂಡಲೇ ತನ್ನ ಬೈಸಿಕಲ್ ನಿಲ್ಲಿಸಿ ಶಬ್ದದ ಮೂಲವನ್ನು ಹುಡುಕಲು ಪ್ರಾರಂಭಿಸಿದಾಗ ಪೊದೆಯಲ್ಲಿ ಹೆಣ್ಣು ಮಗು ಕಂಡುಬಂದಿದೆ. ನಂತರ ವಾಚ್ ಮ್ಯಾನ್ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಮಹಿಳಾ ಸಿಬ್ಬಂದಿ ಈಗ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ.
ಪೋಷಕರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಣ್ಣು ಮಗುವನ್ನು ಮಜೋಲಾ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಅಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಆರೈಕೆ ಮಾಡುತ್ತಿದ್ದಾರೆ. ಮಗು ಆರೋಗ್ಯವಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಅದೃಷ್ಟವಶಾತ್ ವಾಚ್ ಮ್ಯಾನ್ ಮಗುವನ್ನು ಸಮಯಕ್ಕೆ ಸರಿಯಾಗಿ ಕಂಡು ರಕ್ಷಿಸಿದ್ದಾರೆ. ನಾಯಿಗಳು, ಕಾಡು ಪ್ರಾಣಿಗಳು ದಾಳಿ ಮಾಡಿದ್ರೆ ಅನಾಹುತವಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.