HomeKarnatakaBIG NEWS : 6 ತಿಂಗಳಲ್ಲಿ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ...

BIG NEWS : 6 ತಿಂಗಳಲ್ಲಿ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಈಶ್ವರ್ ಖಂಡ್ರೆ

ಕಲಬುರಗಿ : 6 ತಿಂಗಳಲ್ಲಿ ಅರಣ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಕಲಬುರಗಿ ಕಲಬುರಗಿ ಅರಣ್ಯ ವೃತ್ತ ಕಚೇರಿಯಲ್ಲಿ ಕಲಬುರಗಿ, ಬೀದರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ನಂತರ ಮಾತನಾಡಿದರು.

ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಅರಣ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯ ಪ್ರಗತಿ ವಿವರಿಸುತ್ತಾ, ಪ್ರಸ್ತುತ ಕಲಬುರಗಿ ವೃತ್ತದ ಕಲಬುರಗಿ, ಬೀದರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ 583 ಹುದ್ದೆ ಮಂಜೂರಾಗಿದ್ದು, ಇದರಲ್ಲಿ 398 ಭರ್ತಿಯಾಗಿವೆ. ಉಳಿದಂತೆ 185 ಹುದ್ದೆಗಳು ಖಾಲಿ ಇವೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆಸಿದ ಸಚಿವ ಈಶ್ವರ ಬಿ. ಖಂಡ್ರೆ ಅವರು, ಖಾಲಿ ಹುದ್ದೆಗಳ ಮಾಹಿತಿ ನೀಡಿದಲ್ಲಿ ಮುಂದಿನ 6 ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಅಲ್ಲಿಯ ವರೆಗೆ ಗುತ್ತಿಗೆ ಮೇಲೆ ಸಿಬ್ಬಂದಿಗಳ ಸೇವೆ ಪಡೆಯಿರಿ ಎಂದು ಸಲಹೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ನೆಡಲಾಗುವ ಮತ್ತು ಸಾರ್ವಜನಿಕರಿಗೆ, ವಿಧ್ಯಾರ್ಥಿಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ನೀಡಲಾಗುವ ಸಸಿಗಳ ಕಥೆ ಏನು? ಅವುಗಳ ಸಂರಕ್ಷಣೆ ಆಗುತ್ತಿವೆ, ಅವು ಬದುಕಿದಾವ, ಅವುಗಳ ಮೇಲೆ ಇಲಾಖೆ ನಿಗಾವಹಿಸಿದೆಯೇ? ಎಂದ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಕಳೆದ 5 ವರ್ಷಗಳಲ್ಲಿ ನೆಡಲಾದ ಸಸಿಗಳ ಇಂದಿನ ಸ್ಥಿತಿಗತಿ ಕುರಿತು ಸಮಗ್ರ ವರದಿ ಸಲ್ಲಿಸಬೇಕೆಂದರು. ಕಲಬುರಗಿ ಸೇರಿದಂತೆ ಈ ಭಾಗದಲ್ಲಿ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಸಸಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಕಲಬುರಗಿಯಲ್ಲಿ ಶೇ.3 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಈ ಪೈಕಿ ಚಿಂಚೋಳಿಯಲ್ಲಿಯೇ ಹೆಚ್ಚು. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಏನೆಲ್ಲ ಸಾಧ್ಯತೆಗಳಿವೆ ಎಲ್ಲವನ್ನು ಮಾಡಿ. ವಿಶೇಷವಾಗಿ ಕೆರೆ, ಬಾವಿ, ಬ್ರಿಡ್ಜ್-ಕಂ-ಬ್ಯಾರೇಜ್, ಜಿಲ್ಲಾ ರಸ್ತೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಮುಂದಿನ 15 ದಿನದಲ್ಲಿ ಯುದ್ದೋಪಾದಿಯಲ್ಲಿ ಗಿಡ ನೆಡಬೇಕು. ಚಿಂಚೋಳಿ ತಾಲೂಕಿನ ಗೊಟ್ಟಂಗೊಟ್ಟ ಮತ್ತು ಆಳಂದ ತಾಲೂಕಿನ ಭೂಸನೂರನಲ್ಲಿನ ದೈವಿ ವನ ಅಭಿವೃದ್ಧಿಗೂ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಭಾವಿಕಟ್ಟಿ ಅವರಿಗೆ ಸೂಚಿಸಿದರು.ಕಲಬುರಗಿ ಮಣ್ಣಿಗೆ ಹೊಂದಿಕೊಳ್ಳುವಂತಹ ಗಿಡಗಳನ್ನು ಹೆಚ್ಚು ಬೆಳೆಸಲು ರೈತರಿಗೆ ಪ್ರೇರೇಪಿಸಬೇಕು. ಈ ಮರಗಳು ವಾಣಿಜ್ಯ ಮರಗಳಾಗಿರಬೇಕು. ಮುಂದೆ ರೈತರಿಗೆ ಲಾಭ ತರುವಂತಿರಬೇಕು. ಇಂತಹ ಯೋಜನೆಗಳು ಹಾಕಿಕೊಂಡಿದಲ್ಲಿ ಇಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಬಹುದಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಸಲಹೆ ನೀಡಿದ ಅರಣ್ಯ ಸಚಿವರು, ಕಲಬುರಗಿ ಜಿಲ್ಲೆಯಲ್ಲಿರುವ 14 ನರ್ಸರಿಗಳು ಮುಂದಿನ ವರ್ಷ 25 ಲಕ್ಷ ಸಸಿಗಳನ್ನು ತಯ್ಯಾರಿಸಬೇಕು ಸೂಚಿಸಿ, ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular