ಸೈಬರ್ ಅಪರಾಧಿಗಳು ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಮತ್ತು ತಮ್ಮ ಅಪ್ಲಿಕೇಶನ್ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ನುಸುಳಿಸಲು ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಮೇಲ್ಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಪಠ್ಯಗಳಲ್ಲಿನ ದುರುದ್ದೇಶಪೂರಿತ ಲಿಂಕ್ಗಳಿಂದ ಅಥವಾ ಅಪ್ಲಿಕೇಶನ್ ಸ್ಟೋರ್ಗಳಲ್ಲಿ ಕಾಣುವ ಅಪ್ಲಿಕೇಶನ್ಗಳಲ್ಲಿ ಮಾಲ್ವೇರ್ ಅನ್ನು ಸರಳವಾಗಿ ಮರೆಮಾಡುವ ಮೂಲಕ ಸೈಬರ್ ಅಪರಾಧಿಗಳು ಸ್ಮಾರ್ಟ್ಫೋನ್ ಬಳಕೆದಾರರಿಗೆ ದೊಡ್ಡ ಅಪಾಯ ತಂದೊಡ್ಡುತ್ತಾರೆ.
ಸೈಬರ್ ಅಪರಾಧಿಗಳು ಮೊಬೈಲ್ ಬಳಕೆದಾರರ ವೈಯಕ್ತಿಕ ಡೇಟಾ ಮತ್ತು ಬ್ಯಾಂಕ್ ವಿವರಗಳನ್ನು ಅಪಾಯಕ್ಕೆ ಒಳಪಡಿಸುತ್ತಾರೆ. ಇತ್ತೀಚಿನ ಆಘಾತಕಾರಿ ಘಟನೆಯಲ್ಲಿ ಎರಡು ಸ್ಪೈವೇರ್ ಅಪ್ಲಿಕೇಶನ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ಅಡಗಿಕೊಂಡಿರುವುದು 1.5 ಮಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.
ಒಂದೇ ಡೆವಲಪರ್ನಿಂದ ಬಂದಿರುವ ಎರಡು ಅಪ್ಲಿಕೇಶನ್ಗಳು ಒಂದೇ ರೀತಿಯ ದುರುದ್ದೇಶಪೂರಿತ ನಡವಳಿಕೆಯನ್ನು ಒಳಗೊಂಡಿವೆ ಎಂದು ಮೊಬೈಲ್ ಸೈಬರ್ ಸೆಕ್ಯುರಿಟಿ ಕಂಪನಿ ಪ್ರಡಿಯೊ ಬ್ಲಾಗ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದೆ. ಆತಂಕಕಾರಿ ಸಂಗತಿಯೆಂದರೆ ಸ್ಪೈವೇರ್ ಬಳಕೆದಾರರ ಎಲ್ಲಾ ನಿರ್ಣಾಯಕ ಡೇಟಾವನ್ನು ಚೀನಾ ಮೂಲದ ವಿವಿಧ ಸರ್ವರ್ಗಳಿಗೆ ಕಳುಹಿಸುತ್ತಿದೆ.
ಆ ಎರಡು ಅಪ್ಲಿಕೇಶನ್ ಗಳೆಂದರೆ ʼಫೈಲ್ ರಿಕವರಿ ಮತ್ತು ಡೇಟಾ ರಿಕವರಿʼ, ಇವು 1 ಮಿಲಿಯನ್ಗಿಂತಲೂ ಹೆಚ್ಚು ಇನ್ ಸ್ಟಾಲ್ ಆಗಿವೆ. ʼಫೈಲ್ ಮ್ಯಾನೇಜರ್ʼ 5 ಲಕ್ಷಕ್ಕೂ ಹೆಚ್ಚು ಇನ್ ಸ್ಟಾಲ್ ಆಗಿದೆ. ಈ ಎರಡೂ ಅಪ್ಲಿಕೇಶನ್ಗಳು ಬಳಕೆದಾರರ ಯಾವುದೇ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಹೇಳಿಕೊಳ್ಳುತ್ತವೆ. ಆದಾಗ್ಯೂ ಪ್ರಡಿಯೊನ ವರದಿಯ ಪ್ರಕಾರ ಈ ಎರಡೂ ಅಪ್ಲಿಕೇಶನ್ಗಳು ಬಳಕೆದಾರರ ವೈಯಕ್ತಿಕ ಡೇಟಾವನ್ನು ಸಾಧನದಿಂದ ಮತ್ತು ಇಮೇಲ್, ಸಾಮಾಜಿಕ ನೆಟ್ವರ್ಕ್ಗಳು, ರಿಯಲ್ ಟೈಂ ಲೊಕೇಷನ್, ಮೀಡಿಯಾ, ಮೊಬೈಲ್ ಕಂಟ್ರಿ ಕೋಡ್, ನೆಟ್ವರ್ಕ್ ಪೂರೈಕೆದಾರರ ಹೆಸರು, ಸಿಮ್ ಪೂರೈಕೆದಾರರ ನೆಟ್ವರ್ಕ್ ಕೋಡ್, ಆಪರೇಟಿಂಗ್ ಸಿಸ್ಟಮ್ ಆವೃತ್ತಿ ಸಂಖ್ಯೆ ಮತ್ತು ಸಾಧನದ ಬ್ರ್ಯಾಂಡ್ ಮತ್ತು ಮಾದರಿಗಳಿಂದ ಪಡೆಯುತ್ತವೆ ಎಂದು ಹೇಳಿದೆ.