ಬೆಳಗಾವಿ : ಆಪ್ತರಿಂದಲೇ ಹತ್ಯೆಗೀಡಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಪಂಚಭೂತಗಳಲ್ಲಿ ಲೀನರಾದರು.
ಹಿರೇಕೋಡಿಗೆ ಗ್ರಾಮದ ನಂದಿಪರ್ವತ ಆಶ್ರಮದ ಪಕ್ಕದ ಜಮೀನಿನಲ್ಲಿ ಜೈನ ಸಂಪ್ರದಾಯದಂತೆ ಜೈನ ಮಠಗಳ ಮಹಾಸ್ವಾಮಿಗಳ ನೇತೃತ್ವದಲ್ಲಿ ಜೈನಮುನಿ ಸ್ವಾಮೀಜಿಗಳ ಅಂತ್ಯ ಸಂಸ್ಕಾರ ನೆರವೇರಿತು. ಜೈನಮುನಿಯ ಅವರ ಪೂರ್ವಾಶ್ರಮದ ಅಣ್ಣನ ಮಗ, ಆಶ್ರಮದ ಟ್ರಸ್ಟ್ ಅಧ್ಯಕ್ಷ ಭೀಮಗೊಂಡ ಉಗಾರೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಜೈನಮಠದ ಸ್ವಾಮೀಜಿಗಳು, ಶ್ರೀಗಳ ಭಕ್ತರು ಭಾಗಿಯಾಗಿದ್ದರು.
ಜೈನ ಮುನಿ ಹತ್ಯೆ ಪ್ರಕರಣ ಸಂಬಂಧ ರಾಯಬಾಗ ತಾಲೂಕಿನ ಕಾಟಕಬಾವಿ ಗ್ರಾಮದ ನಾರಾಯಣ ಮಾಳಿ, ಹಸನ್ ಡಾಲಾಯತ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿ 4 ಗಂಟೆಗೊಳಗಾಗಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಭಯಾನಕ ಸತ್ಯ ಬಿಚ್ಚಿಟ್ಟ ಹಂತಕರು
ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಭಯಾನಕ ಸತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಸ್ವಾಮೀಜಿಗೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್ ನೀಡಿ ನಂತರ ಕತ್ತು ಹಿಸುಕಿ ಕೊಲೆ ಮಾಡಿ ನಂತರ ತುಂಡು ತುಂಡಾಗಿ ಕತ್ತರಿಸಿದ್ದೇವೆ ಎಂದು ವಿಚಾರಣೆ ಬಾಯ್ಬಿಟ್ಟಿದ್ದಾರೆ.ಪ್ರಕರಣ ಸಂಬಂಧ ನಾರಾಯಣ ಮಾಳಿ (35) ಹುಸೇನ್(34) ಎಂಬ ಹಂತಕರನ್ನು ಬಂಧಿಸಲಾಗಿದ್ದು, ಶನಿವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕೊಳವೆಬಾವಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಶವವನ್ನು ಹೊರ ತೆಗೆಯಲಾಗಿದೆ. ಆರೋಪಿ ನಾರಾಯಣ ಸ್ವಾಮಿ ಜೈನಮುನಿಯಿಂದ 6 ಲಕ್ಷ ಹಣ ಪಡೆದಿದ್ದನು. ಇದನ್ನು ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಜುಲೈ 5 ರಂದು ಹಂತಕರು ಸ್ವಾಮೀಜಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆರೋಪಿ ನಾರಾಯಣ ವಿದ್ಯುತ್ ಶಾಕ್ ನೀಡಿ ಕತ್ತು ಹಿಸುಕಿ ಸ್ವಾಮೀಜಿಯನ್ನು ಕೊಂದಿದ್ದಾನೆ. ನಂತರ ಹುಸೇನ್ ಗೆ ಕರೆ ಮಾಡಿ ಬರಲು ಹೇಳಿ, ಇಬ್ಬರು ಶವವನ್ನು ಬೈಕ್ ನಲ್ಲಿ ಸಾಗಿಸಿದ್ದಾರೆ. ಶವ ಹೂಳಿದರೆ ಪೊಲೀಸ್ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂದು ಸ್ವಾಮೀಜಿಯ ದೇಹವನ್ನು ಪೀಸ್ ಪೀಸ್ ಮಾಡಿ ಸೀರೆಯಲ್ಲಿ ಸುತ್ತಿ ಕೊಳವೆ ಬಾವಿಗೆ ಹಾಕಿದ್ದಾರೆ.