ಪಾಟ್ನಾ: ಪತಿ ಇಲ್ಲದಿದ್ದಾಗ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ಪುರುಷನ ಗುಪ್ತಾಂಗವನ್ನು ಮಹಿಳೆಯೊಬ್ಬರು ಭಾಗಶಃ ಸೀಳಿರುವ ಘಟನೆ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
20ರ ಹರೆಯದ ಮಹಿಳೆ ಶುಕ್ರವಾರ ರಾತ್ರಿ ಮಲಗಿದ್ದಾಗ 27ರ ಹರೆಯದ ಆರೋಪಿ ಮನೆಯ ಮಾಳಿಗೆಯಿಂದ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ, ಅವಳು ಪ್ರತಿಭಟಿಸಿದ್ದರೂ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ, ಅವಳು ಹತ್ತಿರದಲ್ಲಿದ್ದ ಶೇವಿಂಗ್ ಬ್ಲೇಡ್ ಎತ್ತಿಕೊಂಡು ಅವನ ಜನನಾಂಗ ಸೀಳಿದ್ದಾಳೆ. ನಂತರ ಅವನ ಹಿಡಿತದಿಂದ ಹೊರಬಂದು ಕೂಗಾಡಿದ್ದಾಳೆ. ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ ಆರೋಪಿ ಪರಾರಿಯಾಗಿದ್ದ.
ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಲಗುವ ವೇಳೆ ಒಳಗಿನಿಂದ ಛಾವಣಿಯ ಬಾಗಿಲಿಗೆ ಚಿಲಕ ಹಾಕುವುದನ್ನು ಮರೆತಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಆತ್ಮ ರಕ್ಷಣೆಗಾಗಿ ವ್ಯಕ್ತಿಯ ಜನನಾಂಗ ಭಾಗಶಃ ಸೀಳಲಾಗಿದೆ. ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಯನ್ನು ಬಂಧಿಸಿದ್ದೇವೆ ಎಂದು ಬಂಕಾ ಟೌನ್ ಎಸ್‌ಹೆಚ್‌ಒ ಶಂಭು ಯಾದವ್ ತಿಳಿಸಿದ್ದಾರೆ.