![](https://kannadadunia.com/wp-content/uploads/2023/07/e2d76646-bc83-434c-a4d5-3e0630ac2795.jpg)
ರಸ್ತೆ ಅಗಲೀಕರಣಕ್ಕಾಗಿ ದೇವಸ್ಥಾನ ಮತ್ತು ಮಸೀದಿಯನ್ನ ನೆಲಸಮ ಮಾಡುವ ಮುನ್ನ ಪೊಲೀಸ್ ಅಧಿಕಾರಿಯೊಬ್ಬರು ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯಲ್ಲಿ ಎಡಿಸಿಪಿ ಸುಬೋಧ್ ಗೋಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ಪಿಡಬ್ಲ್ಯುಡಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಆಂಜನೇಯ ದೇವಾಲಯ ಮತ್ತು ಮಸೀದಿಯನ್ನು ತೆರವುಗೊಳಿಸಿತು.
ಮೇಲ್ಸೇತುವೆ ನಿರ್ಮಾಣಕ್ಕಾಗಿ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದೆ ಇಡೀ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಧಾರ್ಮಿಕ ಸಮಿತಿ ಸಭೆಯಲ್ಲಿ ಎರಡು ಕಟ್ಟಡಗಳನ್ನು ತೆರವು ಮಾಡುವ ನಿರ್ಧಾರ ಮಾಡಲಾಗಿತ್ತು. ನಿವಾಸಿಗಳು ಮತ್ತು ಸ್ಥಳೀಯ ಮುಖಂಡರೊಂದಿಗೆ ಸೂಕ್ತ ಮಾತುಕತೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಶಾನ್ಯ ದೆಹಲಿಯನ್ನು ಕೋಮು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. ಇದು 2020 ರಲ್ಲಿ ಗಲಭೆಗೆ ಸಾಕ್ಷಿಯಾಯಿತು. ಆ ವೇಳೆ 50 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದಕ್ಕಾಗಿ ತೆರವು ಕಾರ್ಯಾಚರಣೆ ವೇಳೆ ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.