ನವದೆಹಲಿ: ಚಿಲ್ಲರೆ ಬೆಲೆಗಳಲ್ಲಿನ ಹಣದುಬ್ಬರದ ಪ್ರವೃತ್ತಿ ಪರಿಶೀಲಿಸಲು ಗೋಧಿ ಮತ್ತು ಅಕ್ಕಿಯ ಇ-ಹರಾಜು ನಡೆಸಲು ಸರ್ಕಾರವು ಭಾರತೀಯ ಆಹಾರ ನಿಗಮಕ್ಕೆ(ಎಫ್‌ಸಿಐ) ನಿರ್ದೇಶನ ನೀಡಿದೆ.
ನವದೆಹಲಿಯಲ್ಲಿ ಮಾತನಾಡಿದ ಎಫ್‌ಸಿಐ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮೀನಾ, ಸರಾಸರಿ ಗುಣಮಟ್ಟದ ಗೋಧಿಯ ಮೂಲ ಬೆಲೆಯನ್ನು ಕ್ವಿಂಟಲ್‌ಗೆ 2150 ರೂಪಾಯಿ ನಿಗದಿಪಡಿಸಲಾಗಿದೆ. ಗೋಧಿ ಸಂಗ್ರಹಣೆಯನ್ನು ನಿಯಂತ್ರಿಸುವ ಸಲುವಾಗಿ, ಹರಾಜಿನಲ್ಲಿ ಭಾಗವಹಿಸಲು ಗೋಧಿ ಸ್ಟಾಕ್ ಮಾನಿಟರಿಂಗ್ ಸಿಸ್ಟಮ್ ಪೋರ್ಟಲ್‌ನಲ್ಲಿ ಘೋಷಣೆ ಕಡ್ಡಾಯವಾಗಿದೆ ಎಂದು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ, ನಿಜವಾದ ವ್ಯಾಪಾರಿಗಳನ್ನು ಗುರುತಿಸಲು, ಭಾಗವಹಿಸಲು ಮಾನ್ಯ FSSAI ಪರವಾನಗಿಯನ್ನು ಸಹ ಕಡ್ಡಾಯಗೊಳಿಸಲಾಗಿದೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ(ದೇಶೀಯ) ಅಡಿಯಲ್ಲಿ ಅಕ್ಕಿಗಾಗಿ ಇ-ಹರಾಜು ಜುಲೈ 5 ರಿಂದ ಪ್ರಾರಂಭವಾಗುತ್ತದೆ. ಅಕ್ಕಿಯ ಮೂಲ ಬೆಲೆ ಕ್ವಿಂಟಲ್ ಗೆ 3100 ರೂ. ನಿಗದಿಪಡಿಸಲಾಗಿದೆ. ಭಾರತದ ಆಹಾರ ನಿಗಮವು ಈ ವರ್ಷದ ಮಾರ್ಚ್ 15 ರವರೆಗೆ ಗೋಧಿಯ ಆರು ವಾರದ ಇ-ಹರಾಜುಗಳನ್ನು ನಡೆಸಿದೆ.