ಬೆಂಗಳೂರು: ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಚಿಂತನೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ 14 ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.
ಕಾರ್ಮಿಕ ವಲಯದ ಸಮಸ್ಯೆ ಅರಿತು ಅವುಗಳನ್ನು ಪರಿಹರಿಸಿಕೊಳ್ಳಲು ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಶೇಕಡ 85ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಅವರ ಕನಿಷ್ಠ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರಿ ವ್ಯವಸ್ಥೆಯಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವ ಡಿ ಗ್ರೂಪ್ ನೌಕರರನ್ನು ಸರ್ಕಾರಿ ವ್ಯವಸ್ಥೆಯ ಅಡಿ ತರಬೇಕೆಂಬ ಬೇಡಿಕೆ ಸ್ವೀಕರಿಸಲಾಗಿದೆ. ಆನ್ಲೈನ್ ವ್ಯಾಪಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.