ಪ್ಯಾರಿಸ್ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ತಮ್ಮ ವರ್ತನೆಯಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಗ್ಲೋಬಲ್ ಫೈನಾನ್ಸಿಂಗ್ ಪ್ಯಾಕ್ಟ್ ನ ಎರಡು ದಿನಗಳ ಶೃಂಗಸಭೆಗಾಗಿ ಪ್ರಧಾನಿ ಶೆಹಬಾಜ್ ಷರೀಫ್ ಪ್ಯಾರಿಸ್‌ನಲ್ಲಿದ್ದಾರೆ. ಮಳೆ ಬರುತ್ತಿದ್ದ ಸಮಯದಲ್ಲಿ ಅವರು ಮಹಿಳೆಯಿಂದ ಛತ್ರಿ ತೆಗೆದುಕೊಂಡು ಮಹಿಳೆಯನ್ನು ಮಳೆಯಲ್ಲೇ ಬಿಟ್ಟಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಪಾಕ್ ಪ್ರಧಾನಿ ನಡೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ಆಗುತ್ತಿರುವ ವಿಡಿಯೋ ತುಣುಕಿನಲ್ಲಿ ಪ್ಯಾರಿಸ್ ಶೃಂಗಸಭೆಯಲ್ಲಿ ಮಳೆಯ ನಡುವೆ ಶೆಹಬಾಜ್ ಷರೀಫ್ ಮಹಿಳಾ ಸಿಬ್ಬಂದಿಯ ಕೈಯಿಂದ ಛತ್ರಿಯನ್ನು ಕಸಿದುಕೊಳ್ಳುತ್ತಿರುವುದು ಕಂಡುಬಂದಿದೆ. ಬಳಿಕ ಅವರು ಮಳೆಯಲ್ಲಿ ಛತ್ರಿ ಹಿಡಿದು ಮುಂದೆ ಸಾಗುತ್ತಾ ಮಹಿಳೆಯನ್ನ ಹಿಂದೆಯೇ ಬಿಟ್ಟುಹೋಗುತ್ತಾರೆ.
ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪ್ರಧಾನಿಯ ವರ್ತನೆಯಿಂದ ಕೋಪಗೊಂಡಿದ್ದು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ಮುಂದಿನ ವಾರದಲ್ಲಿ ಕ್ರೆಡಿಟ್ ಲೈನ್ ಅವಧಿ ಮುಗಿಯುವ ಮೊದಲು ತಡೆಹಿಡಿಯಲಾದ ಹಣವನ್ನು ಪಡೆಯಲು ಅಂತಿಮ ಪ್ರಯತ್ನಕ್ಕಾಗಿ ಪ್ರಧಾನಿ ಶೆಹಬಾಜ್ ಷರೀಫ್ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ.
ಆದರೆ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರಂತಹ ಜಾಗತಿಕ ನಾಯಕರೊಂದಿಗಿನ ಅವರ ಸಭೆಗಳಿಗಿಂತ ಈಗ ಟ್ರೆಂಡಿಂಗ್ ಆಗಿರುವುದು ಪ್ಯಾಲೈಸ್ ಬ್ರೋಂಗ್ನಿಯಾರ್ಟ್‌ಗೆ ಅವರು ಆಗಮಿಸುವಾಗ ತೋರಿದ ವರ್ತನೆ.