ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಜುಲೈನಿಂದ ಸಿಗುವುದು ಅನುಮಾನವಾಗಿದೆ. ಅಕ್ಕಿ ಅಲಭ್ಯತೆ ಹಿನ್ನೆಲೆಯಲ್ಲಿ ವಿತರಣೆ ವಿಳಂಬವಾಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಈ ಕುರಿತು ಸುಳಿವು ನೀಡಿದ್ದಾರೆ. ಭಾರತೀಯ ಆಹಾರ ನಿಗಮದಿಂದ ಅಕ್ಕಿ ಖರೀದಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ನಡೆದಿದ್ದು, ಅದು ಫಲಪ್ರದವಾಗಿಲ್ಲ. ಹೀಗಾಗಿ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಅನ್ನ ಭಾಗ್ಯ ಯೋಜನೆ ಅಡಿಯ 10 ಕೆಜಿ ಅಕ್ಕಿ ಕೊಡುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದ್ದು, ಜುಲೈನಲ್ಲಿ ಯೋಜನೆ ಜಾರಿಯಾಗುವುದು ಅನುಮಾನವೆಂದು ಹೇಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 10 ಕೆಜಿ ಅಕ್ಕಿ ನೀಡುವ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಸಚಿವ ಮುನಿಯಪ್ಪ ಕೇಂದ್ರ ಆಹಾರ ಸಚಿವರನ್ನು ಬುಧವಾರ ದೆಹಲಿಯಲ್ಲಿ ಭೇಟಿಯಾಗಿ ಅಕ್ಕಿ ಖರೀದಿಗೆ ಅನುಮತಿ ನೀಡಲು ಮನವಿ ಮಾಡಲಿದ್ದಾರೆ. ಹೇಗಾದರೂ ನಾವು ಅಕ್ಕಿ ಖರೀದಿಸಿ ಅನ್ನಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿಯನ್ನು ಕೊಟ್ಟೆ ಕೊಡುತ್ತೇವೆ. ಸ್ವಲ್ಪ ತಡವಾಗಬಹುದು ಅಷ್ಟೇ ಎಂದು ತಿಳಿಸಿದ್ದಾರೆ.
ಎಫ್‌ಸಿಐನಿಂದ ಅಕ್ಕಿ ಲಭ್ಯವಿಲ್ಲದ ಕಾರಣ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿರುವ ರಾಜ್ಯ ಸರ್ಕಾರ ನಾಫೆಡ್ ಅಥವಾ ಎನ್.ಸಿ.ಎಫ್.ನಿಂದ ಅಕ್ಕಿ ಖರೀದಿಸುವ ಅವಕಾಶ ನೀಡುವಂತೆ ಮನವಿ ಮಾಡಲಿದೆ. ಕೇಂದ್ರ ಆಹಾರ ಸಚಿವ ಪಿಯುಷ್ ಗೋಯಲ್ ಅವರನ್ನು ಸಚಿವ ಕೆ.ಹೆಚ್. ಮುನಿಯಪ್ಪ ಭೇಟಿಯಾಗಿ ಮನವಿ ಮಾಡಲಿದ್ದಾರೆ.