ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ರನ್ನು ಆಡಿಸದೇ ಇದ್ದ ವಿಚಾರವಾಗಿ ಬಹಳಷ್ಟು ಟೀಕೆಗಳು ಕೇಳಿ ಬಂದಿದ್ದವು.
ಸತತ ಎರಡನೇ ಬಾರಿಗೆ ಡಬ್ಲ್ಯೂಟಿಸಿ ಫೈನಲ್‌ಗೆ ಭಾರತ ತಲುಪಲು ಪ್ರಮುಖ ಕಾರಣರಾಗಿದ್ದ ಅಶ್ವಿನ್ ನಿರ್ಣಾಯಕ ಪಂದ್ಯದಲ್ಲೇ ಬೆಂಚ್ ಕಾಯಿಸಿದ್ದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಅಶ್ವಿನ್ ತಮ್ಮ ಬೌಲಿಂಗ್‌ನಲ್ಲಿ ಸಿಕ್ಕಾಪಟ್ಟೆ ವೈವಿಧ್ಯತೆಗಳನ್ನು ತಂದು ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ಧಾರೆ.
ಈ ಕುರಿತು ಮಾತನಾಡಿದ ಅಶ್ವಿನ್, “ಬರೀ ವಿಕೆಟ್‌ಗಳು ಹಾಗೂ ರನ್ ಗಳಿಸಿದ್ದನ್ನು ಮೀರಿ ಜೀವನದಲ್ಲಿ ನಾನು ಏನೆಲ್ಲಾ ಮಾಡಿದ್ದೇನೆ ಎಂಬ ವಿಚಾರವಾಗಿ ನನಗೆ ಹೆಮ್ಮೆ ಇದೆ. ನನ್ನನ್ನು ನಾನು ನಿರಂತರವಾಗಿ ಮರುಅನ್ವೇಷಣೆ ಮಾಡಿಕೊಳ್ಳುವಲ್ಲಿ ಸಫಲನಾಗಿದ್ದಕ್ಕೆ ಸಂತಸವಿದೆ. ಯಾರಿಗೇ ಆದರೂ ವಯಸ್ಸು ಹೆಚ್ಚುತ್ತಾ ಸಾಗಿದಂತೆ ಒಂದು ಬಗೆಯ ಅಭದ್ರತೆ ಕಾಡುತ್ತದೆ. ನನ್ನ ಪ್ರಕಾರ, ಕ್ರಿಕೆಟರುಗಳು ಅನುಭವ ಹೆಚ್ಚಾದಂತೆ ಒಂದು ರೀತಿಯ ಬಿಗುವಾದ ಪರಿಸ್ಥಿತಿಯಲ್ಲಿ ಸಿಲುಕಲು ಆರಂಭಿಸುತ್ತಾರೆ,” ಎಂದಿದ್ದಾರೆ ಅಶ್ವಿನ್.
ಕಳೆದ ವರ್ಷಾಂತ್ಯದ ಬಾಂಗ್ಲಾದೇಶ ಸರಣಿ ವೇಳೆ ಅನುಭವಿಸಿದ ಮಂಡಿ ನೋವಿನ ವಿಚಾರವಾಗಿ ಮಾತನಾಡಿದ ಅಶ್ವಿನ್, “ನಾನು ಬಾಂಗ್ಲಾದೇಶದಿಂದ ಮರಳಿ ಬಂದಾಗ, ಇದು ನನ್ನ ಕೊನೆಯ ಸರಣಿಯಾಗಬಹುದು ಎಂದು ನನ್ನ ಪತ್ನಿಗೆ ತಿಳಿಸಿದ್ದೆ. ನನಗೆ ಮಂಡಿಯಲ್ಲಿ ಸಮಸ್ಯೆ ಇದ್ದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯೇ ನನ್ನ ಕೊನೆಯ ಸರಣಿಯಾಗಬಹುದು ಎಂದು ನನ್ನ ಮಡದಿಗೆ ತಿಳಿಸಿದ್ದೆ. ಬೌಲಿಂಗ್ ಮಾಡುವ ವೇಳೆ ಕಾಲನ್ನು ಲ್ಯಾಂಡಿಂಗ್ ಮಾಡುತ್ತಿದ್ದ ರೀತಿಯಲ್ಲಿ ಸಮಸ್ಯೆ ಇದ್ದ ಕಾರಣ ನಾನು ನನ್ನ ಬೌಲಿಂಗ್ ಶೈಲಿಯಲ್ಲಿ ಮಾರ್ಪಾಡು ಮಾಡಲು ಹೊರಟಿದ್ದೆ. ಟಿ20 ವಿಶ್ವಕಪ್ ಕಾರಣದಿಂದ ನನಗೆ ಸಾಕಷ್ಟು ಶ್ರಮ ಹಾಕಲು ಅವಕಾಶ ಸಿಕ್ಕಿರಲಿಲ್ಲ.
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಮಂಡಿ ನೋವು ಕಾಣಿಸಿಕೊಂಡಿತ್ತು. ಮಂಡಿಗಳೂ ಊದಿಕೊಳ್ಳುತ್ತಿದ್ದವು. ಮೂರು ನಾಲ್ಕು ವರ್ಷಗಳಿಂದ ಉತ್ತಮ ಬೌಲಿಂಗ್ ಮಾಡುತ್ತಿದ್ದ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಲು ಹೇಗೆಂದು ಚಿಂತಿಸತೊಡಗಿದೆ. ಮಂಡಿ ಮೇಲೆ ಬಹಳ ಹೊರೆ ಇದ್ದ ಕಾರಣದಿಂದ ನಾನು 2013-14ರಲ್ಲಿನ ಬೌಲಿಂಗ್ ಶೈಲಿಗೆ ಮರಳಲು ಇಚ್ಛಿಸಿದೆ,” ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ವಿರುದ್ಧ ತವರಿನಲ್ಲಿ ಆಯೋಜಿಸಿದ್ದ ಬಾರ್ಡರ್ – ಗಾವಸ್ಕರ್ ಸರಣಿ ಕುರಿತು ಮಾತನಾಡಿದ ಅಶ್ವಿನ್, “ಬೆಂಗಳೂರಿನಲ್ಲಿ ನೋವಿನ ಚುಚ್ಚುಮದ್ದನ್ನು ಪಡೆದ ನಾನು ನನ್ನ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ತಂದುಕೊಂಡೆ. ಮತ್ತೆ ಬೌಲಿಂಗ್ ಮಾಡಲು ಆರಂಭಿಸುತ್ತಲೇ ನನ್ನ ಮಂಡಿ ನೋವು ಮಾಯವಾಗಿತ್ತು. ನಾಗ್ಪುರದಲ್ಲಿ ಮೂರು ನಾಲ್ಕು ದಿನಗಳ ಮಟ್ಟಿಗೆ ಬೌಲಿಂಗ್ ಅಭ್ಯಾಸ ಮಾಡಿದೆ. ಟೆಸ್ಟ್‌ನ ಮೊದಲ ದಿನದಂದು ನಾನೊಬ್ಬ ಬೌಲರ್ ಎಂಬ ಭಾವವೇ ಮೂಡುತ್ತಿರಲಿಲ್ಲ. ಮೂರು ನಾಲ್ಕು ಓವರುಗಳ ಬಳಿಕ ನನ್ನಲ್ಲಿದ್ದ ಅರಿವಿನಿಂದ ಮತ್ತೆ ಹಳಿಗೆ ಬಂದೆ,” ಎಂದು ವಿವರಿಸಿದ್ದಾರೆ ಅಶ್ವಿನ್..
ಸ್ಪಿನ್ ಸ್ನೇಹಿ ಪಿಚ್‌ಗಳೇ ಇದ್ದ ಸರಣಿಯಲ್ಲಿ ರವೀಂದ್ರ ಜಡೇಜಾರೊಂದಿಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಅಶ್ವಿನ್, ಎಡಗೈ ಸ್ಪಿನ್ನರ್ – ಆಲ್‌ರೌಂಡರ್ ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಹಂಚಿಕೊಂಡರು.