ಮೈಸೂರು: ನಾವು ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳನ್ನು ನೋಡಿ ಬಿಜೆಪಿಗೆ ನಡುಕ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಆರಂಭವಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆಗೂ ಮುನ್ನ ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದೇವೆ ಎಂದರು.
ನಾಳೆ ಮಧ್ಯಾಹ್ನ 1 ಗಂಟೆಯಿಂದ ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುತ್ತೇವೆ. ರಾಜ್ಯದ ಎಲ್ಲಾ ಮಹಿಳೆಗೂ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ನನ್ನ ಹೆಂಡತಿ ಬಸ್ ನಲ್ಲಿ ಹೋದ್ರೆ ಅವರಿಗೂ ಫ್ರೀ ಎಂದು ಹೇಳಿದರು.
ಜುಲೈ 1ರಿಂದ ಎಲ್ಲರಿಗೂ 10 ಕೆಜಿ ಉಚಿತ ಅಕ್ಕಿ ವಿತರಿಸಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತ ಅಕ್ಕಿ ಕೊಡುತ್ತೇವೆ. ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳು ಜಾರಿಗೆ ಬರುತ್ತಿವೆ ಎಂದು ಹೇಳಿದರು.