ವಿವಾಹ ವಿಚ್ಛೇದನ ನೋಟಿಸ್ ನೀಡಿದ ಬಳಿಕ ವರದಕ್ಷಿಣೆ ಕಿರುಕುಳ ಸೇರಿದಂತೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಸಲ್ಲಿಸಲಾಗುವ ದೂರುಗಳು ತನ್ನ ಮಹತ್ವ ಕಳೆದುಕೊಳ್ಳುತ್ತವೆ ಎಂದು ಮಹತ್ವದ ಅಭಿಪ್ರಾಯ ಪಟ್ಟಿರುವ ಹೈಕೋರ್ಟ್ ಕಲಬುರ್ಗಿ ಪೀಠ, ಈ ಕುರಿತಂತೆ ಪತಿ ವಿರುದ್ಧ ಪತ್ನಿ ನೀಡಿದ್ದ ದೂರನ್ನು ರದ್ದು ಮಾಡಿದೆ.
ಪ್ರಕರಣದ ವಿವರ: 2013ರಲ್ಲಿ ರಾಯಚೂರಿನ ದೇವದುರ್ಗದ ಸುಮಾ ಎಂಬವರು ಗೋಪಾಲ್ ಗುಂಡ್ಯಾಲ್ ಎಂಬವರನ್ನು ವಿವಾಹವಾಗಿದ್ದು, ಆದರೆ ತನಗೆ ಹಿಂದಿ ಅಥವಾ ಮರಾಠಿ ಬಾರದ ಹಿನ್ನೆಲೆಯಲ್ಲಿ ಪತಿ, ಪುಣೆಗೆ ಕರೆದುಕೊಂಡು ಹೋಗದೆ ಸಂಬಂಧಿಗಳ ಮನೆಯಲ್ಲಿ ಬಿಟ್ಟಿದ್ದಾರೆ ಎಂದು ಸುಮಾ ಆರೋಪಿಸಿದ್ದರು.
ಬಳಿಕ ಪತಿ-ಪತ್ನಿ ನಡುವೆ ಮನಸ್ತಾಪ ಹೆಚ್ಚಾಗಿ, ಪತಿ 2018 ರಲ್ಲಿ ವಿವಾಹ ವಿಚ್ಛೇದನ ಕೋರಿ ಸೊಲ್ಲಾಪುರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪತ್ನಿ ಸುಮಾ ಅವರಿಗೆ ನೋಟಿಸ್ ಕಳುಹಿಸಿದ್ದರು. ಆ ಬಳಿಕ ಪತ್ನಿ, ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ದೂರು ದಾಖಲಿಸಿದ್ದು, ಇದನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಇದೀಗ ಮಾನ್ಯ ನ್ಯಾಯಾಲಯ ಪತಿ ಹಾಗೂ ಆತನ ಕುಟುಂಬದ ವಿರುದ್ಧದ ಎಫ್ಐಆರ್ ರದ್ದು ಮಾಡಿದೆ.