ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕದ್ದಿದ್ದ ಚಿನ್ನದ ಸರವನ್ನು ನುಂಗಿದ ಕಳ್ಳನೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಜಾರ್ಖಂಡ್ನ ರಾಂಚಿಯಲ್ಲಿ ಜರುಗಿದೆ.
ಸಲ್ಮಾನ್ ಹಾಗೂ ಜಾಫರ್ ಹೆಸರಿನ ಇಬ್ಬರು ಸರಗಳ್ಳರು ಇಲ್ಲಿನ ದೊರಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ದುಬಾಢಿ ಸೇತುವೆ ಬಳಿ ಮಹಿಳೆಯೊಬ್ಬರ ಚಿನ್ನದ ಸರ ಕದ್ದು, ತಮ್ಮ ಮೋಟರ್ಬೈಕ್ನಲ್ಲಿ ಪಲಾಯನಗೈದಿದ್ದಾರೆ.
ಇಬ್ಬರನ್ನೂ ಒಂದು ಕಿಮೀ ದೂರದವರೆಗೂ ಅಟ್ಟಿಸಿಕೊಂಡು ಹೋದ ಪೊಲೀಸರು ಇಬ್ಬರನ್ನೂ ಸೆರೆ ಹಿಡಿದಿದ್ದಾರೆ. ಈ ವೇಳೆ ಗಾಬರಿಯಲ್ಲಿ ಸಲ್ಮಾನ್ ತನ್ನ ಬಳಿ ಇದ್ದ ಚಿನ್ನದ ಸರವನ್ನು ನುಂಗಿ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಆತ ಚಿನ್ನದ ಸರ ನುಂಗುವುದನ್ನ ಕಂಡ ಪೊಲೀಸರು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ಎಕ್ಸ್ ರೇ ಪರೀಕ್ಷೆ ಮಾಡಿಸಿದ್ದಾರೆ.
ಈ ವೇಳೆ ಚಿನ್ನದ ಸರ ಸಲ್ಮಾನ್ನ ಎದೆಯಲ್ಲಿ ಸಿಕ್ಕಿಕೊಂಡಿರುವುದು ಕಂಡು ಬಂದಿದೆ. ಎದೆಯಲ್ಲಿ ಸಿಕ್ಕಿಕೊಂಡ ಚೈನ್ನಿದ ಸಲ್ಮಾನ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಆತನನ್ನು ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ರಿಮ್ಸ್) ದಾಖಲಿಸಲಾಗಿದೆ.
ಗ್ಯಾಸ್ಟ್ರೋಸ್ಕೋಪಿ, ಎಂಡೋಸ್ಕೋಪಿ ಅಥವಾ ಸರ್ಜರಿ ಮಾಡಿ ಸರವನ್ನು ಸಲ್ಮಾನ್ನಿಂದ ಮರಳಿ ಪಡೆಯಲಾಗುವುದು ಎಂದು ರಾಂಚಿಯ ಎಸ್ಪಿ ತಿಳಿಸಿದ್ದಾರೆ.