ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕಣ್ಣೀರು ಹಾಕಿದ ಘಟನೆಯನ್ನ ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ನೆನಪಿಸಿಕೊಂಡರು. 2018ರ ಘಟನೆಯನ್ನು ಸ್ಮರಿಸಿಕೊಂಡ ಅವರು, ಎರಡು ವರ್ಷಗಳ ನಿಷೇಧವನ್ನು ಪೂರೈಸಿ ಸಿ ಎಸ್ ಕೆ ಐಪಿಎಲ್‌ಗೆ ಮರಳಿದ ನಂತರ ಎಂಎಸ್ ಧೋನಿ ಡಿನ್ನರ್‌ನಲ್ಲಿ ಅಳುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಮೂರು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಧೋನಿ ಜೊತೆಗೆ ಆಡಿದ ಹರ್ಭಜನ್ ಸಿಂಗ್, ಧೋನಿ ಭಾವುಕರಾಗಿದ್ದ ಕ್ಷಣವನ್ನ ಹಂಚಿಕೊಂಡರು.
“ನಾನು ಹಂಚಿಕೊಳ್ಳಲು ಬಯಸುವ ಒಂದು ಕಥೆ ಇದೆ. 2018 ರಲ್ಲಿ 2 ವರ್ಷಗಳ ನಿಷೇಧದ ನಂತರ CSK ಐಪಿಎಲ್ ಗೆ ಮರಳಿದಾಗ ತಂಡದ ಭೋಜನ ಕೂಟವಿತ್ತು. ಪುರುಷರು ಅಳುವುದಿಲ್ಲ ಎಂಬ ಮಾತನ್ನು ನಾನು ಕೇಳಿದ್ದೇನೆ, ಆದರೆ ಆ ರಾತ್ರಿ ಎಂಎಸ್ ಧೋನಿ ಭಾವುಕರಾಗಿ ಅಳುತ್ತಿದ್ದರು. ಇದರ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹರ್ಭಜನ್ ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದೇ ಚರ್ಚೆಯ ಸಂದರ್ಭದಲ್ಲಿ ಇನ್ನೊಬ್ಬ ಮಾಜಿ ಸಿಎಸ್‌ಕೆ ಸದಸ್ಯ ಇಮ್ರಾನ್ ತಾಹಿರ್, ಧೋನಿ ತಂಡವನ್ನು ಕುಟುಂಬವೆಂದು ಪರಿಗಣಿಸುತ್ತಾರೆ.ಇದು ಎಲ್ಲಾ ಆಟಗಾರರಿಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ ಎಂದು ಹೇಳಿದರು.
“ನಾನು ಸಹ ಅಲ್ಲಿದ್ದೆ. ಅದು ಧೋನಿ ಅವರಿಗೆ ತುಂಬಾ ಭಾವನಾತ್ಮಕ ಕ್ಷಣವಾಗಿತ್ತು. ಅವರನ್ನು ಹಾಗೆ ನೋಡಿದಾಗ ಈ ತಂಡವು ಅವರ ಹೃದಯಕ್ಕೆ ಎಷ್ಟು ಹತ್ತಿರದಲ್ಲಿದೆ ಎಂದು ನನಗೆ ತಿಳಿಯಿತು. ಅವರು ಕ್ರಿಕೆಟ್ ತಂಡವನ್ನ ತಮ್ಮ ಕುಟುಂಬದಂತೆ ಭಾವಿಸುತ್ತಾರೆ. ಇದು ನಮಗೆಲ್ಲರಿಗೂ ತುಂಬಾ ಭಾವನಾತ್ಮಕವಾಗಿತ್ತು.” ಎಂದಿದ್ದಾರೆ.
ತಮ್ಮ IPL ವೃತ್ತಿಜೀವನವನ್ನು CSK ಯೊಂದಿಗೆ ಪ್ರಾರಂಭಿಸಿದ ಧೋನಿ ಇಂದಿಗೂ ತಂಡದ ಭರವಸೆಯ ಆಟಗಾರರಾಗಿದ್ದಾರೆ. 2016 ಮತ್ತು 2017 ರ ಸೀಸನ್‌ಗಳಿಗೆ ಸಿಎಸ್ ಕೆ ತಂಡವನ್ನ ನಿಷೇಧಿಸಿದ ನಂತರ 2018 ರ ಋತುವಿನಲ್ಲಿ ವಾಪಸ್ಸಾದ ತಂಡ IPL ಪ್ರಶಸ್ತಿಯನ್ನು ಗೆದ್ದುಕೊಂಡಿತು.