
ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 200 ಮಂದಿಗೆ ಉಚಿತ ಸ್ಟೆಂಟ್ ಅಳವಡಿಸುವ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಹಮ್ಮಿಕೊಂಡಿದೆ.
ಜೂನ್ 12 ರಿಂದ 18 ರವರೆಗೆ ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಶನ್ ಹಾಗೂ ಅಮೆರಿಕದ ಮೆಡ್ ಟ್ರಾನಿಕ್ಸ್ ವಿಸ್ಕಿನ್ಸನ್ ಸಂಸ್ಥೆಗಳ ಸಹಯೋಗದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆಂಜಿಯೋ ಪ್ಲಾಸ್ಟಿ ಕಾರ್ಯಾಗಾರ ನಡೆಯಲಿದೆ.
ಜೂನ್ 12 ರಿಂದ 14ರ ವರೆಗೆ ಆಸ್ಪತ್ರೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ, ಜೂನ್ 15, 16 ರಂದು ಮೈಸೂರು ಶಾಖೆಯಲ್ಲಿ, ಜೂನ್ 17, 18 ರಂದು ಕಲ್ಬುರ್ಗಿ ಶಾಖೆಯಲ್ಲಿ ಉಚಿತ ಸ್ಟೆಂಟ್ ಅಳವಡಿಸುವ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ನಡೆಯಲಿದೆ.
ಬಡ ರೋಗಿಗಳು ಹಾಗೂ ಬಿಪಿಎಲ್ ಕುಟುಂಬದ ಹಿರಿಯ ನಾಗರೀಕರು ಸೌಲಭ್ಯ ಪಡೆದುಕೊಳ್ಳಬಹುದು. ಪ್ರತಿ ರೋಗಿಗೂ ಉನ್ನತಮಟ್ಟದ ಸ್ಟೆಂಟ್ ಗಳನ್ನು ಉಚಿತವಾಗಿ ಅಳವಡಿಸಲಾಗುತ್ತದೆ. ಈಗಾಗಲೇ ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟ ರೋಗಿಗಳು ಸೌಲಭ್ಯ ಪಡೆದುಕೊಳ್ಳಬಹುದು. ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಆಸಕ್ತರು ಜೂನ್ 8 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. ಮಾಹಿತಿಗಾಗಿ 9480827888, 080 26944874 ಸಂಪರ್ಕಿಸಬಹುದು.