ಇಂದೋರ್: 32 ಹಿರಿಯ ನಾಗರಿಕರು ತಮ್ಮ ಮೊದಲ ವಿಮಾನ ಪ್ರಯಾಣ ಮಾಡುವ ಮುನ್ನ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಹಿರಿಯ ನಾಗರಿಕರು ಶಿರಡಿ ದರ್ಶನ ಪಡೆಯುವುದಕ್ಕಾಗಿ ಮಧ್ಯಪ್ರದೇಶದ ಇಂದೋರ್‌ನ ದೇವಿ ಅಹಲ್ಯಾ ಬಾಯಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಹೌದು, ಮಧ್ಯಪ್ರದೇಶದ 32 ಮಂದಿ ಹಿರಿಯ ನಾಗರಿಕರು ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆಯಡಿ ಮಂಗಳವಾರ ಮಧ್ಯಾಹ್ನ 12.25ಕ್ಕೆ ವಿಮಾನದ ಮೂಲಕ ಶಿರಡಿಗೆ ತೆರಳಿದರು. ಎಲ್ಲಾ ಯಾತ್ರಿಕರು 65 ವರ್ಷದಿಂದ 76 ವರ್ಷ ವಯಸ್ಸಿನವರು. ಅದೇ ರೀತಿ ಭೋಪಾಲ್‌ನಲ್ಲಿ ಭಾನುವಾರ 32 ವೃದ್ಧರು ವಿಮಾನದ ಮೂಲಕ ಪ್ರಯಾಗ್‌ರಾಜ್‌ಗೆ ತೆರಳಿದ್ದಾರೆ.
ಈ ಪ್ರಯಾಣದಲ್ಲಿ ಅಗರ್ ಮಾಲ್ವಾ ಡೆಪ್ಯುಟಿ ಕಲೆಕ್ಟರ್ ಸರ್ವೇಶ್ ಯಾದವ್ ಸಹ ಪ್ರಯಾಣಿಕರೊಂದಿಗೆ ಇದ್ದರು. ಶಿರಡಿಯಲ್ಲಿ ಈ ಯಾತ್ರಾರ್ಥಿಗಳಿಗೆ ಪ್ರಯಾಣ, ತಂಗುವಿಕೆ, ಆಹಾರ ಇತ್ಯಾದಿಗಳ ವ್ಯವಸ್ಥೆಯನ್ನು ಸಹ ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗಿದೆ.
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್‌ನಿಂದ ಪ್ರಯಾಣಿಕರನ್ನು ಬೀಳ್ಕೊಟ್ಟರು. ಯಾತ್ರಾರ್ಥಿಗಳು ಪ್ರಯಾಣದ ಬಗ್ಗೆ ಉತ್ಸುಕರಾಗಿದ್ದರು. ಹೀಗಾಗಿ ಕೆಲವರು ವಿಮಾನ ನಿಲ್ದಾಣದಲ್ಲಿ ನೃತ್ಯ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಶಂಕರ್ ಲಾಲ್ವಾನಿ ಮತ್ತು ಕೆಲವು ಸ್ಥಳೀಯ ಬಿಜೆಪಿ ನಾಯಕರು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಇಲ್ಲಿಯವರೆಗೆ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆಯಡಿ ಪ್ರಯಾಣಿಕರನ್ನು ರೈಲಿನ ಮೂಲಕ ತೀರ್ಥಯಾತ್ರೆಗೆ ಕರೆದೊಯ್ಯಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಪ್ರಯಾಣಿಕರು ವಿಮಾನದ ಮೂಲಕ ತೀರ್ಥಕ್ಷೇತ್ರಗಳಿಗೆ ತೆರಳುತ್ತಿದ್ದಾರೆ.