
ವೇಗವಾಗಿ ಚಲಿಸ್ತಿದ್ದ ಕಾರ್ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ನದಿಗೆ ಉರುಳಿಬಿದ್ದು ಇಬ್ಬರು ಗಾಯಗೊಂಡಿರೋ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಅಂಬೆಗಾಂವ್ ತಾಲೂಕಿನ ಪೂರ್ವ ಭಾಗದ ಪರಗಾಂವ್ ಶಿಂಗ್ವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿವೆ.
ಸ್ಕಾರ್ಪಿಯೋ ಕಾರು ಸೇತುವೆಯಿಂದ ಘೋಡ್ ನದಿಗೆ ಉರುಳಿ ತೀವ್ರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಇಬ್ಬರೂ ವ್ಯಕ್ತಿಗಳು ಅಪಘಾತದಲ್ಲಿ ಪಾರಾಗಿದ್ದಾರೆ. ಪರ್ಗಾಂವ್ ಪೊಲೀಸರು ವರದಿ ಮಾಡಿದಂತೆ ಮೇ 19 ರಂದು ಸಂಜೆ 7 ಗಂಟೆ ಸುಮಾರಿಗೆ ಈ ಅಹಿತಕರ ಘಟನೆ ಸಂಭವಿಸಿದೆ.
ಗಾಯಗೊಂಡ ಇಬ್ಬರ ಹೆಸರು ಸುರೇಶ್ ಗೋವಿಂದ್ ಡಾಟೆ (58) ಮತ್ತು ನಾರಾಯಣ ಡೋಕೆ (50). ಅದೃಷ್ಟವಶಾತ್ ಸೇತುವೆಯ ಸಮೀಪದಲ್ಲಿ ಹೊಸ ಸೇತುವೆ ನಿರ್ಮಿಸಿದ್ದರಿಂದ ಸುಮಾರು 30 ರಿಂದ 40 ಕಿಲೋಮೀಟರ್ ದೂರದ ನದಿ ಪಾತ್ರದಲ್ಲಿ ನೀರಿನ ಹರಿವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಅವರ ಜೀವ ಉಳಿಯಲು ಕಾರಣವಾಯಿತು.
ಪೋಲೀಸರ ಪ್ರಕಾರ ಘೋಡ್ ನದಿಯ ಪರ್ಗಾಂವ್ ಸೇತುವೆಯ ಮೇಲೆ ಸ್ಕಾರ್ಪಿಯೋ ಅತಿ ವೇಗವಾಗಿ ಚಲಿಸುತ್ತಿತ್ತು. ಚಾಲಕ ಸುರೇಶ್ ಗೋವಿಂದ್ ಡಾಟೆ ಎಂಬುವವರ ನಿಯಂತ್ರಣ ತಪ್ಪಿದ ಕಾರು ಎರಡು ಬಾರಿ ಪಲ್ಟಿಯಾಗಿ ನದಿಯ ತಳಕ್ಕೆ ಬಿದ್ದಿದೆ. ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದು, ನಾರಾಯಣ ಡೋಕೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.