ನವದೆಹಲಿ: ಈ ವರ್ಷ ಖಾರಿಫ್ ಹಂಗಾಮಿಗೆ ರಸಗೊಬ್ಬರ ಸಬ್ಸಿಡಿಗಾಗಿ ಸರ್ಕಾರದಿಂದ 1,08,000 ಕೋಟಿ ರೂ. ನೀಡಲಾಗುವುದು.
ರಸಗೊಬ್ಬರ ಸಬ್ಸಿಡಿಗೆ 1.08 ಲಕ್ಷ ಕೋಟಿ ರೂ. ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಾ. ಮನ್ಸುಖ್ ಮಾಂಡವಿಯಾ, ರಸಗೊಬ್ಬರಗಳ ಬೆಲೆಯನ್ನು ಹೆಚ್ಚಿಸುವುದಿಲ್ಲ ಮತ್ತು ರೈತರು ಅದೇ ವೆಚ್ಚದಲ್ಲಿ ಪೋಷಕಾಂಶ ಆಧಾರಿತ ರಸಗೊಬ್ಬರಗಳನ್ನು ಈಗಿನಂತೆ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ರಸಗೊಬ್ಬರ ಸಬ್ಸಿಡಿ ನೀಡಲು ಯೂರಿಯಾಕ್ಕೆ 70 ಸಾವಿರ ಕೋಟಿ ರೂ. ಹಾಗೂ ಡಿಎಪಿಗೆ 38 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ರೈತರಿಗೆ ಕಡಿಮೆ ಬೆಲೆಯಲ್ಲಿ ರಸಗೊಬ್ಬರ ಸಿಗುತ್ತಿದೆ. ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ರಸಗೊಬ್ಬರ ಬೆಲೆ ಏರಿಕೆಯಾಗಿದ್ದರೂ ಸರ್ಕಾರ ಕೈಗೆಟಕುವ ದರದಲ್ಲಿ ರಸಗೊಬ್ಬರಗಳನ್ನು ನೀಡಿದೆ ಎಂದರು.