ಖಾಸಗಿ ಕಂಪನಿಯ ಹಿರಿಯ ಅಧಿಕಾರಿಯೊಬ್ಬರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಬೆಂಕಿ ನಂದಿಸಲು ಬಂದ ಸಿಬ್ಬಂದಿ ಕಣ್ಣಿಗೆ ಕೋಟಿ ಕೋಟಿ ನಗದು ಹಣ ಕಂಡಿದ್ದು ಶಾಕ್ ಮೂಡಿಸಿದೆ. ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಲೆಕ್ಕಕ್ಕೆ ಸಿಗದ 1.65 ಕೋಟಿ ರೂ. ನಗದು ಪತ್ತೆಯಾಗಿದೆ.
ಖಾಸಗಿ ಕಂಪನಿಯಲ್ಲಿ ಡಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್ ಅವರ ರೆಜಿಮೆಂಟಲ್ ಬಜಾರ್ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಗೋಪಾಲಪುರಂ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದ್ದು, ನೆಲಮಹಡಿಯಲ್ಲಿದ್ದ ಹಳೆಯ ಪೀಠೋಪಕರಣಗಳು ಮತ್ತು ಕಸಕ್ಕೆ ಮಾತ್ರ ಘಟನೆಯಿಂದ ಹಾನಿಯಾಗಿತ್ತು.
ಆದಾಗ್ಯೂ, ಬೆಂಕಿಯ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ ಮೊದಲ ಮಹಡಿಯಲ್ಲಿ ಹಣದ ಸುಳಿವು ಸಿಕ್ಕಿತು. ಕಟ್ಟಡವನ್ನು ಪ್ರವೇಶಿಸಿದ ಅವರು 1,64,46,000 ರೂಪಾಯಿ ನಗದು, ಹಲವಾರು ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಜಪ್ತಿ ಮಾಡಿರುವ ನಗದು ಹವಾಲಾ ಹಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮನೆಯ ಮಾಲೀಕ ಶ್ರೀನಿವಾಸ್ ಅವರು ಪ್ರಸ್ತುತ ಪಟ್ಟಣದಿಂದ ಹೊರಗಿದ್ದು, ಖಾಸಗಿ ಕಂಪನಿಯಲ್ಲಿ ಡಿಜಿಎಂ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಸರ್ಕಾರಿ ವಿದ್ಯುತ್ ಗುತ್ತಿಗೆಯನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ವಶಪಡಿಸಿಕೊಂಡ ಬಗ್ಗೆ ಪೊಲೀಸರು ಆದಾಯ ತೆರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವರಿಂದ ತನಿಖೆ ಆರಂಭವಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆಂಕಿ ಅವಘಡ ಸಂಭವಿಸಿದ್ದು ಆಸ್ತಿಪಾಸ್ತಿಗೆ ಹಾನಿಯುಂಟಾಗಿದೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.