2027 ರ ವೇಳೆಗೆ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಬೇಕು. ಹಾಗೂ ಎಲೆಕ್ಟ್ರಿಕ್ ಮತ್ತು ಅನಿಲ ಇಂಧನ ವಾಹನಗಳಿಗೆ ಇದನ್ನು ಬದಲಾಯಿಸಬೇಕು ಎಂದು ತೈಲ ಸಚಿವಾಲಯವು ನಿಯೋಜಿಸಿದ ವರದಿ ಹೇಳಿದೆ.
ಮಾಜಿ ತೈಲ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಸಮಿತಿಯ ವರದಿಯು, 2035ರ ವೇಳೆಗೆ ಡೀಸೆಲ್ ಬಳಕೆಯ ಮೋಟಾರ್ ಸೈಕಲ್‌ಗಳು, ಸ್ಕೂಟರ್‌ಗಳು ಮತ್ತು ತ್ರಿಚಕ್ರ ವಾಹನಗಳನ್ನು ಹಂತಹಂತವಾಗಿ ನಿಲ್ಲಿಸುವಂತೆ ಸೂಚಿಸಿದೆ. ಸುಮಾರು 10 ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಯಾವುದೇ ಡೀಸೆಲ್ ಸಿಟಿ ಬಸ್‌ಗಳನ್ನು ಬಳಸಬಾರದು ಎಂದು ಈ ವರ್ಷದ ಫೆಬ್ರವರಿಯಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಈ ವರದಿಯನ್ನು ಸರ್ಕಾರ ಇನ್ನೂ ಅಂಗೀಕರಿಸಿಲ್ಲ.
ಕಾರುಗಳು, ಟ್ಯಾಕ್ಸಿಗಳು ಸೇರಿದಂತೆ ನಾಲ್ಕು-ಚಕ್ರ ವಾಹನಗಳನ್ನು ಭಾಗಶಃ ಎಲೆಕ್ಟ್ರಿಕ್‌ಗೆ ಮತ್ತು ಭಾಗಶಃ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಪ್ರತಿ ವರ್ಗದಲ್ಲಿ ಸುಮಾರು 50 ಪ್ರತಿಶತದಷ್ಟು ಪಾಲನ್ನು ಬದಲಾಯಿಸಲು ಅದು ಕರೆ ನೀಡಿದೆ. ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳನ್ನು ಸಾಧ್ಯವಾದಷ್ಟು ಬೇಗ ನಿರ್ಮೂಲನೆ ಮಾಡಬೇಕು. ಹೀಗಾಗಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಹೆಚ್ಚಿನ ಮಾಲಿನ್ಯ ಹೊಂದಿರುವ ಎಲ್ಲಾ ಪಟ್ಟಣಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳ ನಿಷೇಧವನ್ನು ಐದು ವರ್ಷಗಳಲ್ಲಿ ಜಾರಿಗೊಳಿಸಬೇಕು. ಅಂದರೆ 2027 ರ ವೇಳೆಗೆ ನಿಷೇಧಿಸಬೇಕು ಎಂದು ಹೇಳಿದೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು, ಮಾರ್ಚ್ 31ರ ನಂತರ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಅಡಿಯಲ್ಲಿ ನೀಡಲಾದ ಪ್ರೋತ್ಸಾಹದ ಉದ್ದೇಶಿತ ವಿಸ್ತರಣೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ವರದಿ ತಿಳಿಸಿದೆ.