1992 ರಲ್ಲಿ ಫ್ಲಾಟ್ ಗಾಗಿ 1.33 ಲಕ್ಷ ಪಾವತಿಸಿದ ಮುಂಬೈನ ಅಂಧೇರಿಯ ವ್ಯಕ್ತಿಯೊಬ್ಬರಿಗೆ ತನ್ನ ಸೊಸೈಟಿಯಲ್ಲಿ ಫ್ಲಾಟ್ ನೀಡುವಂತೆ ರಾಜ್ಯ ಗ್ರಾಹಕ ಆಯೋಗವು ಕಂಪನಿಗೆ ಸೂಚಿಸಿದೆ. ಅದು ಸಾಧ್ಯವಾಗದಿದ್ದರೆ, ಸಂಸ್ಥೆಯು ಅವರಿಗೆ ಹತ್ತಿರದ ಪ್ರದೇಶದಲ್ಲಿ ಮತ್ತೊಂದು ಫ್ಲಾಟ್ ನೀಡಬೇಕು ಅಥವಾ 60 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಹೇಳಿದೆ.
ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಪರಿಹಾರವಾಗಿ 1 ಲಕ್ಷ ರೂ. ಪರಿಹಾರ ನೀಡುವಂತೆ ಆಯೋಗ ಸೂಚಿಸಿದೆ. 2012 ರ ನಂತರದ ಬಾಡಿಗೆಯನ್ನೂ ಪಾವತಿಸಲು ಕಂಪನಿಗೆ ಗ್ರಾಹಕ ಆಯೋಗ ಹೇಳಿದೆ.
ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎಸ್‌ಸಿಡಿಆರ್‌ಸಿ) ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಪಿ. ತವಡೆ ಮತ್ತು ನ್ಯಾಯಾಂಗ ಸದಸ್ಯ ಎ.ಜೆಡ್. ಖ್ವಾಜಾ ಅವರು ಈ ಆದೇಶ ಹೊರಡಿಸಿದ್ದಾರೆ. ಲೋಕಪ್ರಿಯಾ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಕಂಪನಿಯ ಮೂವರು ನಿರ್ದೇಶಕರ ವಿರುದ್ಧ ಪ್ರಕಾಶ್ ದೋಂಡ್ ನೀಡಿದ ದೂರಿನ ಮೇರೆಗೆ ಈ ಆದೇಶ ಮಾಡಲಾಗಿದೆ.
ಲೋಕಪ್ರಿಯ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್‌ನಲ್ಲಿ ಪ್ರಕಾಶ್ ದೋಂಡ್ ಇತರರೊಂದಿಗೆ ಸದಸ್ಯರಾಗಿದ್ದರು. ಅವರು ಭಾಂಡಪ್‌ನಲ್ಲಿರುವ ಸೊಸೈಟಿಯಲ್ಲಿ 525 ಚದರ ಅಡಿ ವಿಸ್ತೀರ್ಣದ ಒಂದು ಅಪಾರ್ಟ್‌ಮೆಂಟ್ ಅನ್ನು ಬುಕ್ ಮಾಡಿದ್ದರು.
1992ರ ಮೇನಲ್ಲಿ ದೋಂಡ್ ಮತ್ತು ಲೋಕಪ್ರಿಯಾ ಹೌಸಿಂಗ್ ಡೆವಲಪ್‌ಮೆಂಟ್ ಸೊಸೈಟಿ ಪ್ರೈವೇಟ್ ಲಿಮಿಟೆಡ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅದರ ಆಧಾರದ ಮೇಲೆ ಅವರು ₹1.33 ಲಕ್ಷ ಪಾವತಿಸಿದರು. ಮೂರು ವರ್ಷಗಳಲ್ಲಿ ದೋಂಡ್ ಫ್ಲಾಟ್ ಅನ್ನು ಪಡೆಯತ್ತಾರೆ ಎಂದು ಭರವಸೆ ನೀಡಲಾಯಿತು. ಆದರೆ ಕಂಪನಿಯು ತನ್ನ ಭರವಸೆಯನ್ನು ನಿರಾಕರಿಸುತ್ತಲೇ ಇತ್ತು.
ನಂತರ ಸೊಸೈಟಿಯ ಮತ್ತೊಂದು ವಿಭಾಗದಲ್ಲಿ ದೋಂಡ್‌ಗೆ ಫ್ಲಾಟ್ ನೀಡುವ ಭರವಸೆ ನೀಡಿದರು. ಆದರೆ ಆ ಭರವಸೆಯನ್ನೂ ಮುರಿದರು. ಜುಲೈ 2004 ರಲ್ಲಿ ಲೋಕಪ್ರಿಯಾ ಅವರು ಫ್ಲಾಟ್ ಸಿದ್ಧವಾಗುವವರೆಗೆ ನವಿ ಮುಂಬೈನಲ್ಲಿ ಫ್ಲ್ಯಾಟ್ ಅನ್ನು ನೀಡುವುದಾಗಿ ಹೇಳಿದರು. ಅದೂ ಕೂಡ ಸಾಧ್ಯವಾಗಲಿಲ್ಲ.
ಅಕ್ಟೋಬರ್ 2010 ರಿಂದ ಪ್ರಾರಂಭವಾಗಿ ತಿಂಗಳಿಗೆ 5,000 ರೂ. ಪಾವತಿಸಲು ಡೆವಲಪರ್ ಒಪ್ಪಿಗೆ ನೀಡಿದ ಬಾಡಿಗೆ ಮನೆಯಲ್ಲಿ ದೋಂಡ್ ಉಳಿದುಕೊಂಡರು. ಆದರೆ ಬಾಡಿಗೆ ಹಣವನ್ನ ಎಂದಿಗೂ ಪಾವತಿಸಲಿಲ್ಲ. ಅಂತಿಮವಾಗಿ ದೋಂಡ್ ಗ್ರಾಹಕರ ಆಯೋಗವನ್ನು ಸಂಪರ್ಕಿಸಿದರು.