ಪವಿತ್ರ ಗೋಲ್ಡನ್ ಟೆಂಪಲ್ ಇರುವ ಪಂಜಾಬಿನ ಅಮೃತಸರದಲ್ಲಿ ಪಾರಂಪರಿಕ ದೇಗುಲಕ್ಕೆ ಹೋಗುವ ಹಾದಿಯಲ್ಲೇ ಇಂದು ಬೆಳಿಗ್ಗೆ 6:30 ರ ಸುಮಾರಿಗೆ ಮತ್ತೊಂದು ನಿಗೂಢ ಸ್ಫೋಟ ಸಂಭವಿಸಿದೆ. ಕೇವಲ ಮೂರು ದಿನಗಳ ಅಂತರದಲ್ಲೇ ನಡೆದಿರುವ ಎರಡನೇ ಸ್ಪೋಟ ಇದಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ಮೊದಲು ಶನಿವಾರ ರಾತ್ರಿ ಇದೇ ರಸ್ತೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ ಪರಿಣಾಮ ಪ್ರವಾಸಿಗರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದರು. ಇದು ಸ್ಥಳದಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿತ್ತು. ಸ್ಪೋಟದ ಕಾರಣ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಕಳಿಸಲಾಗಿದ್ದು, ಇದರ ಮಧ್ಯೆ ಇಂದು ಮತ್ತೊಂದು ಸ್ಫೋಟ ನಡೆದಿದೆ.
ಇಂದಿನ ಸ್ಫೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಅಂತಿಮ ವರದಿ ಬಂದ ಬಳಿಕ ಸ್ಫೋಟದ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಈ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.