ಧಾರವಾಡ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ 37 ಅಂಕ ಪಡೆದಿದ್ದ ವಿದ್ಯಾರ್ಥಿನಿ ಈಗ 97 ಅಂಕ ಗಳಿಸಿದ್ದಾಳೆ.
ಇದರಿಂದಾಗಿ ಉತ್ತರ ಪತ್ರಿಕೆ ಮೌಲ್ಯಮಾಪಕರ ನಿರ್ಲಕ್ಷ್ಯ ಮತ್ತೊಮ್ಮೆ ಬಯಲಾದಂತಾಗಿದೆ. ಧಾರವಾಡದ ವೈ.ಬಿ. ಅಣ್ಣಿಗೇರಿ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಧರಣಿ ಅವರಿಗೆ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಕನ್ನಡದಲ್ಲಿ 37 ಅಂಕ ಬಂದಿತ್ತು. ಇದರಿಂದ ಅನುಮಾನಗೊಂಡ ಧರಣಿ ಕನ್ನಡ ವಿಷಯದ ಉತ್ತರ ಪತ್ರಿಕೆ ಜೆರಾಕ್ಸ್ ಪತ್ರಿಕೆ ತರಿಸಿದಾಗ 97 ಅಂಕ ಬಂದಿರುವುದು ಗೊತ್ತಾಗಿದೆ.
ಧರಣಿ ಅವರಿಗೆ ಭೌತಶಾಸ್ತ್ರ 93, ರಸಾಯನಶಾಸ್ತ್ರ 85, ಗಣಿತ 92, ಜೀವಶಾಸ್ತ್ರ 81, ಇಂಗ್ಲಿಷ್ 80 ಅಂಕಗಳು ಬಂದಿದ್ದು ಕನ್ನಡದಲ್ಲಿ ಮಾತ್ರ 37 ಅಂಕ ಬಂದಿದ್ದರಿಂದ ಜೆರಾಕ್ಸ್ ಪ್ರತಿ ತರಿಸಲಾಗಿತ್ತು. ಮೌಲ್ಯಮಾಪಕರ ಮತ್ತು ವಿಷಯ ಮೇಲ್ವಿಚಾರಕರ ನಿರ್ಲಕ್ಷದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಇಂತಹ ಆಚಾತುರ್ಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯ ಪೋಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿ ಆಗ್ರಹಿಸಿದೆ.