ಪ್ರಧಾನಮಂತ್ರಿ ನರೇಂದ್ರಮೋದಿಯವರ ʼಮನ್ ಕೀ ಬಾತ್ʼ ನೂರನೇ ಸಂಚಿಕೆಯ ವಿಶೇಷ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ಉತ್ತರ ಪ್ರದೇಶದ ಸ್ವ-ಸಹಾಯ ಸಂಘದ ಸದಸ್ಯೆ ಪೂನಂ ದೇವಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಈ ಘಟನೆ ಜರುಗಿತು.
ʼಮನ್ ಕೀ ಬಾತ್ʼ ರೇಡಿಯೊ ಕಾರ್ಯಕ್ರಮದ ಸಂಚಿಕೆಗಳಲ್ಲಿ ಲಖಿಂಪುರಿ ಖೇರಿ ಬಳಿಯ ಸ್ವ-ಸಹಾಯ ಗುಂಪಿನ ಸದಸ್ಯರಾಗಿರುವ 24 ವರ್ಷ ವಯಸ್ಸಿನ ಪೂನಂ ದೇವಿ ಅವರ ಬಗ್ಗೆ ಪ್ರಧಾನಮಂತ್ರಿ ಮೋದಿ ʼಮನ್ ಕೀ ಬಾತ್ʼ ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ವಿಜ್ಞಾನ ಭವನದಲ್ಲಿ ನಡೆದ ಸಮಾವೇಶಕ್ಕೆ ವಿಶೇಷ ಆಹ್ವಾನಿತರನ್ನಾಗಿ ಕರೆಯಲಾಗಿತ್ತು.
ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಪೂನಂ ಅವರು ವಿಜ್ಞಾನ ಭವನದಲ್ಲಿ ಜರುಗಿದ ಸಮಾವೇಶದ ಸಮಯದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಅವರು ತಮ್ಮ ಹಳ್ಳಿಗೆ ಮರಳಿದ್ದಾರೆ.
ಲಖಿಂಪುರ ಖೇರಿಯಲ್ಲಿರುವ ಸ್ವ-ಸಹಾಯ ಗುಂಪೊಂದು ಬಾಳೆ ದಿಂಡಿನಿಂದ ಫೈಬರ್ ಬಳಸಿ ಕೈಚೀಲಗಳು, ಚಾಪೆಗಳು ಮತ್ತು ಇತರ ವಸ್ತುಗಳನ್ನು ಉತ್ಪಾದಿಸುತ್ತದೆ. ಇದು ಹಳ್ಳಿಯ ಮಹಿಳೆಯರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುತ್ತದೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ.
ಸಮಾಜಕ್ಕೆ ಅವರ ಅಸಾಧಾರಣ ಕೊಡುಗೆಗಾಗಿ ಈ ಹಿಂದಿನ ತಮ್ಮ ʼಮನ್ ಕೀ ಬಾತ್ʼ ಸಂಚಿಕೆಗಳಲ್ಲಿ ಪ್ರಧಾನ ಮಂತ್ರಿಯವರು ಹೆಸರುಗಳನ್ನು ಉಲ್ಲೇಖಿಸಿದ್ದವರ ಪೈಕಿ 100 ಆಹ್ವಾನಿತರಲ್ಲಿ ಪೂನಮ್ ಕೂಡ ಸೇರಿದ್ದರು.
ಭಾನುವಾರದಂದು ಪ್ರಸಾರವಾಗಲಿರುವ ʼಮನ್ ಕೀ ಬಾತ್ʼನ 100 ನೇ ಸಂಚಿಕೆಯನ್ನು ಆಚರಿಸಲು ಒಂದು ದಿನದ ಸಮಾವೇಶವನ್ನು ಆಯೋಜಿಸಲಾಗಿತ್ತು.