
2016ರ ಜೂನ್‌ನಲ್ಲಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕುಲಕರ್ಣಿ ಅವರನ್ನು 2020 ರ ನವೆಂಬರ್‌ನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನ್ಯಾಯಾಲಯದ ಅನುಮತಿಯಿಲ್ಲದೆ ಅವರು ಎಲ್ಲಿಯೂ ಹೋಗುವಂತಿಲ್ಲ. ಹೈಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿತ್ತು.
ಪತಿ ಕ್ಷೇತ್ರಕ್ಕೆ ಬರದಂತೆ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಶಿವಲೀಲಾ ಕುಲಕರ್ಣಿ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದು, ಪತಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮತ್ತೊಂದೆಡೆ ಕುಲಕರ್ಣಿ ಅವರ ಎದುರಾಳಿ, ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ.

