ತನ್ನ ಸಹೋದರಿ ಮದುವೆಗೆಂದು ಇಟ್ಟಿದ್ದ 12 ಲಕ್ಷ ರೂಪಾಯಿಗಳನ್ನು ಸೈಬರ್ ಕ್ರಿಮಿನಲ್ಗಳ ವಂಚನೆ ಜಾಲಕ್ಕೆ ಕಳೆದುಕೊಂಡ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ಜರುಗಿದೆ.
ವಾದಿತ್ಯಾ ಅರವಿಂದ್ ಹೆಸರಿನ 30 ವರ್ಷ ವಯಸ್ಸಿನ ಸಾಫ್ಟ್ವೇರ್ ಇಂಜಿನಿಯರ್, ಸಂಗಾರೆಡ್ಡಿ ಜಿಲ್ಲೆಯ ಪುಲ್ಕಲ್ ಮಂಡಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ವಾದಿತ್ಯಾ, ತಮ್ಮ ಪತ್ನಿ ಹಾಗೂ ಹೆತ್ತವರೊಂದಿಗೆ ಸಂಗಾರೆಡ್ಡಿಯ ಗೊಲ್ಲಗುಡೆಂ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಟೆಲಿಗ್ರಾಂ ಮೆಸೆಂಜರ್ನಲ್ಲಿ ಬಂದ ಲಿಂಕ್ ಒಂದನ್ನು ತೆರೆದ ವಾದಿತ್ಯಾ, ಅಲ್ಲಿ ಹೇಳಿದ ಟಾಸ್ಕ್ಗಳನ್ನು ಪೂರ್ತಿಗೊಳಿಸುವ ಮೂಲಕ 200ರೂ. ಹೂಡಿಕೆ ಮೇಲೆ 50ರೂ. ಲಾಭ ಪಡೆದಿದ್ದಾರೆ. ಇದರಿಂದ ಉತ್ತೇಜನಗೊಂಡ ವಾದಿತ್ಯಾ, ಇನ್ನಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ 12 ಲಕ್ಷ ರೂ.ಗಳವರೆಗೂ ಕಳೆದುಕೊಂಡಿದ್ದಾರೆ.
ಮೆ 5ರಂದು ತಮ್ಮ ಸಹೋದರಿಯ ಮದುವೆಗೆಂದು ಈ ದುಡ್ಡನ್ನು ವಾದಿತ್ಯ ಕೂಡಿಟ್ಟಿದ್ದರು. ಸೈಬರ್ ಚೋರರಿಗೆ ತಮ್ಮ ದುಡ್ಡನ್ನು ಹಿಂದಿರುಗಿಸಲು ಟೆಲಿಗ್ರಾಂ ಸಂದೇಶದ ಮೂಲಕ ವಾದಿತ್ಯಾ ಕೇಳಿಕೊಂಡಿದ್ದಾರೆ. ಆದರೆ ವಂಚಕರಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಕೂಡಲೇ ಆತ್ಮಹತ್ಯಾ ನೋಟ್ ಬರೆದಿಟ್ಟ ವಾದಿತ್ಯಾ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.