ಮುಖದ ಮೇಲೆ ತ್ರಿವರ್ಣವಿದ್ದ ಕಾರಣಕ್ಕೆ ಹುಡುಗಿಯೊಬ್ಬಳಿಗೆ ಒಳ ಪ್ರವೇಶಿಸಲು ಅನುಮತಿ ನೀಡದೇ ಸುದ್ದಿ ಮಾಡಿದ್ದ ಸ್ವರ್ಣ ಮಂದಿರದ ಭದ್ರತಾ ಸಿಬ್ಬಂದಿ ಇದೀಗ ಅದೇ ವಿಚಾರದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಆ ಹುಡುಗಿ ಸ್ಕರ್ಟ್ ಧರಿಸಿದ್ದು, ಆಕೆಯ ಕಾಲುಗಳು ಕಾಣುತ್ತಿದ್ದ ಕಾರಣ ಹೀಗೆ ಮಾಡಲಾಯಿತು ಎಂದು ಸ್ಪಷ್ಟನೆ ನೀಡಲಾಗಿದೆ.
“ಆಕೆಯ ಮೊಗದ ಮೇಲಿದ್ದ ಧ್ವಜದಲ್ಲಿ ಅಶೋಕ ಚಕ್ರ ಇರಲಿಲ್ಲ. ಬಹುಶಃ ಅದು ಯಾವುದೋ ರಾಜಕೀಯ ಪಕ್ಷದ್ದಿರಬಹುದು. ಆಕೆ ಸ್ಕರ್ಟ್ ಧರಿಸಿದ್ದಳು. ಸ್ವಣ ಮಂದಿರದ ಆವರಣದಲ್ಲಿ ಸಭ್ಯತೆ ಕಾಪಾಡಿಕೊಳ್ಳಲು ದೇಹವನ್ನು ಮುಚ್ಚಿಕೊಳ್ಳಲು ನಾವು ಆಕೆಗೆ ತಿಳಿಸಿದೆವು. ಕಾಲುಗಳು ಸಂಪೂರ್ಣವಾಗಿ ಮುಚ್ಚಿರಬೇಕು. ಹರ್ಮಂದಿರ ಸಾಹಿಬ್‌ಗೆ ಸರ್ವರಿಗೂ ಸ್ವಾಗತ ಕೋರುತ್ತೇವೆ. ಆದರೆ ಈ ಸ್ಥಳದ ಸಭ್ಯತೆ ಮಾನದಂಡಗಳನ್ನು ಪಾಲಿಸಬೇಕು,” ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಗಾರ್ಡ್ ಸಬ್ಜಿತ್ ಸಿಂಗ್ ತಿಳಿಸಿದ್ದಾರೆ.
’ಇದು ಭಾರತವಲ್ಲ. ಇದು ಪಂಜಾಬ್’ ಎಂದು ಸಬ್ಜಿತ್ ಸಿಂಗ್ ಬಾಲಕಿಗೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿ ಭಾರೀ ವಿವಾದ ಸೃಷ್ಟಿಯಾದ ಬೆನ್ನಿಗೆ ಎಸ್‌ಜಿಪಿಸಿ ಕ್ಷಮೆಯಾಚಿಸಿದೆ. ಇದೇ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗಿದ್ದು, ಎಲ್ಲೆಡೆಯಿಂದ ವ್ಯಾಪಕ ಟೀಕೆಗೆ ಗ್ರಾಸವಾಗಿದೆ.
ಘಟನೆ ಕುರಿತು ಸ್ಪಷ್ಟನೆ ನೀಡಿರುವ ಎಸ್‌ಜಿಪಿಸಿ ಮಹಾಕಾರ್ಯದರ್ಶಿ ಗುರ್ಚರಣ್ ಸಿಂಗ್, “ನಮ್ಮ ಸಿಬ್ಬಂದಿಯನ್ನು ಕೆಣಕಲಾಗಿತ್ತು. ಎಸ್‌ಜಿಪಿಸಿಯ ಮಹಾ ಕಾರ್ಯದರ್ಶಿಯಾಗಿ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಸಾಮಾಜಿಕ ಜಾಲತಾಣದಲ್ಲಿನ ಟ್ರೋಲ್‌ಗಳ ಉದ್ದೇಶಗಳು ನಾಚಿಗೇಡಿನದ್ದಾಗಿವೆ,” ಎಂದು ತಿಳಿಸಿದ್ದಾರೆ.