ಹುಬ್ಬಳ್ಳಿ: ಬಿಜೆಪಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿಯೇ ನನ್ನ ಹೆಸರು ಇಲ್ಲದಿದ್ದಾಗ ವರಿಷ್ಠರನ್ನು ಕೇಳಿದ್ದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಿಮಗೆ ಟಿಕೆಟ್ ಕೊಡಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ತಿಳಿಸಿದ್ದರು. ನೀವೇ ಚುನಾವಣೆಗೆ ಆಸಕ್ತಿ ಇಲ್ಲ ಎಂದು ಹೇಳಿಬಿಡಿ. ಒಂದು ಪತ್ರ ಕಳುಹಿಸುತ್ತೇವೆ. ಅದಕ್ಕೆ ಸಹಿ ಮಾಡಿ ಕಳುಹಿಸಿ ಎಂದು ಹೇಳಿದ್ದರು. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯ ಮಾತು ಕೇಳಿ ಆಘಾತವಾಯ್ತು ಎಂದು ಶೆಟ್ಟರ್ ತಿಳಿಸಿದ್ದಾರೆ.
ಸೌಹಾರ್ದಯುತವಾಗಿ ಕರೆದು ಮಾತನಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ, ಬಿಜೆಪಿಯವರು ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸರವಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿತ್ತು. ಹಾಳು ಮಾಡಿಕೊಂಡರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಬಿಜೆಪಿಯವರೇ ತಡೆದಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.
ನಾನು ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ.