ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶೆಟ್ಟರ್ ನಿರ್ಧಾರವನ್ನು ಪ್ರಶ್ನಿಸಿರುವ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಮರು ಪ್ರಶ್ನೆ ಮುಂದಿಟ್ಟಿದ್ದಾರೆ.
ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ನನ್ನ ನಿರ್ಧಾರವನ್ನು ಪ್ರಶ್ನಿಸಿರುವ ಮಾಜಿ ಸಿಎಂ ಯಡಿಯೂರಪ್ಪನವರಿಗೆ ನನ್ನದೊಂದು ಪ್ರಶ್ನೆ. ಅಂದು 2012ರಲ್ಲಿ ಯಡಿಯೂರಪ್ಪನವರು ಬಿಜೆಪಿ ಒಡೆದು ಕೆಜಿಪಿ ಕಟ್ಟಿದ್ದರು. ಯಾಕೆ ಅಂತಹ ತೀರ್ಮಾನ ಮಾಡಿದ್ದರು ? ಎಂದು ಕೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ನಾನೇ ಬೆಳೆಸಿದ ಹುಡುಗರು ಇದ್ದಾರೆ. ಅವರನ್ನು ಎಷ್ಟು ದಿನ ಹಿಡಿದಿಟ್ಟುಕೊಳ್ಳಲು ಸಾಧ್ಯ? ಅವರು ದೈಹಿಕವಾಗಿ ಬಿಜೆಪಿಯಲ್ಲಿದ್ದರೂ ಮಾನಸಿಕವಾಗಿ ನನ್ನ ಜೊತೆಗಿದ್ದಾರೆ. ಈವರೆಗೆ ಬೇರೆ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು. ಬೆಂಗಳೂರಿಗೆ ತೆರಳಿ ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ನಾನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಟಿಕೆಟ್ ಮಾತ್ರ ಕೇಳಿದ್ದೆ. ಆದರೆ ರಾಜ್ಯಸಭೆಗೆ ಕಳಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ. ಅದಕ್ಕೆ ಯಾಕೆ ಮೂಲೆಗೆ ಕೂರಿಸಲು ಯತ್ನಿಸುತ್ತೀರಿ ಎಂದು ಪ್ರಶ್ನಿಸಿದೆ. ನಾನು ಕೇಳುತ್ತಿರುವುದು ಒಂದು ಟಿಕೆಟ್ ಎಂದು ಕೇಳಿದರೂ ಒಪ್ಪಲಿಲ್ಲ. ಅನಿವಾರ್ಯವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ತಿಳಿಸಿದ್ದಾರೆ.