ದೇಶದುದ್ದಗಲಕ್ಕೂ ಭಾರೀ ಜನಪ್ರಿಯವಾಗಿರುವ ಪಾನಿಪುರಿ ಎಂದರೆ ಯಾರಿಗೆ ಇಷ್ಟವಿಲ್ಲ? ಮಹಾರಾಷ್ಟ್ರದ ಕೊಲ್ಹಾಪುರದ ಪಾನಿಪುರಿ ಅಂಗಡಿಯೊಂದು ಮಕ್ಕಳಿಗೆ ವಿಶೇಷವಾಗಿ ಇಷ್ಟವಾಗುತ್ತಿದೆ.
ಕೊಲ್ಹಾಪುರದ ರಂಕಲಾದ ನಿವಾಸಿಯಾದ ಅಶ್ವಿನಿ ಉಮೇಶ್ ಸಾವಂತ್ ಇಲ್ಲಿನ ಖರಾಡೇ ಕಾಲೇಜಿನ ಬಳಿ ಪಾನಿಪೂರಿ ಮಾರುತ್ತಾರೆ. ಅಶ್ವಿನಿಯವರ ತಂದೆ ಹಾಗೂ ಸಹೋದರರು ಸಹ ಅವರಿಗೆ ಸಹಾಯ ಮಾಡುತ್ತಾರೆ. ಪಾನಿಪೂರಿ, ದಾಬೇಲಿ, ಆಲೂಗಡ್ಡೆ ಸ್ಪ್ರಿಂಗ್‌ಗಳು ಸೇರಿದಂತೆ ಅನೇಕ ಖಾದ್ಯಗಳನ್ನು ಅಶ್ವಿನಿ ಮಾರುತ್ತಾರೆ.
ಎರಡು ತಿಂಗಳಿನಿಂದ ಪಾನಿಪೂರಿ ಗಾಡಿ ನಡೆಸುತ್ತಿರುವ ಅಶ್ವಿನಿ, ಇದೀಗ ಮಕ್ಕಳಿಗೆಂದು ವಿಶೇಷವಾದ ಚಾಕ್ಲೇಟ್ ಪಾನಿಪೂರಿ ಮಾಡುತ್ತಾರೆ. ಜೊತೆಗೆ ವಾರದಲ್ಲಿ ಎರಡು ದಿನಗಳ ಮಟ್ಟಿಗೆ ತಮ್ಮ ಗ್ರಾಹಕರಿಗೆ ಅನಿಯಮಿತ ಪಾನಿಪೂರಿ ಮಾರುತ್ತಾರೆ ಅಶ್ವಿನಿ.
ಗುರುವಾರಗಳು ಹಾಗು ಶನಿವಾರಗಳಲ್ಲಿ ತಲಾ 49 ರೂ.ಗೆ ಅನಿಯಮಿತ ಪಾನಿ ಪೂರಿ ಮಾರುತ್ತಾರೆ ಅಶ್ವಿನಿ. ಚಾಕ್ಲೆಟ್ ಪಾನಿಪೂರಿ ಒಳಗೆ ಮಿಲ್ಕ್‌ಶೇಕ್, ಗೋಡಂಬಿ, ಬಾದಾಮಿ, ಒಣಹಣ್ಣುಗಳು, ರೇನ್‌ಬೋ ಸ್ಪ್ರಿಂಕಲ್‌ಗಳ ಮಿಶ್ರಣದ ಮೇಲೆ ದ್ರವರೂಪದ ಚಾಕ್ಲೆಟ್ ಸುರಿದು ಮಾರಾಟ ಮಾಡುತ್ತಾರೆ. ಈ ಚಾಕ್ಲೆಟ್ ಪಾನಿಪೂರಿಯ ಬೆಲೆ ಪ್ಲೇಟ್‌ಗೆ 40 ರೂಪಾಯಿ.