ಏಪ್ರಿಲ್ ತಿಂಗಳಲ್ಲಿ ಮೂಡುವ ಪೂರ್ಣ ಚಂದ್ರನನ್ನು ತನ್ನ ಬಣ್ಣದ ಕಾರಣದಿಂದ ’ಪಿಂಕ್ ಮೂನ್’ ಎಂದು ಅನೇಕ ಕಡೆ ಕರೆಯಲಾಗುತ್ತದೆ. 2023ರ ಮೊದಲ ಸೂಪರ್ ಮೂನ್ ಇದಾಗಿದೆ. ಏಪ್ರಿಲ್ 6ರಂದು ಮೂಡಿದ ವರ್ಷದ ಮೊದಲ ನಸುಗೆಂಪು ಪೂರ್ಣ ಚಂದ್ರನನ್ನು ಜಗತ್ತಿನಾದ್ಯಂತ ಜನರು ಕಂಡು ಖುಷಿ ಪಟ್ಟಿದ್ದಾರೆ.
ವಸಂತ ಋತುವಿನಲ್ಲಿ ಮೂಡುವ ವನಪುಷ್ಪವೊಂದರ ಹೆಸರಿನಲ್ಲಿ ಏಪ್ರಿಲ್‌ನ ಪೂರ್ಣ ಚಂದ್ರನನ್ನು ಹೀಗೆ ’ಪಿಂಕ್ ಮೂನ್’ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಈ ದಿವಸವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಚೈತ್ರ ಮಾಸದಲ್ಲಿ ಬರುವ ಈ ದಿನವನ್ನು ಹನುಮ ನವಮಿ ಎಂದು ಸಂಭ್ರಮಿಸಲಾಗುತ್ತದೆ.
ಎಂದಿಗಿಂತ ಭೂಮಿಗಿಂತ ತುಸು ಹೆಚ್ಚು ಹತ್ತಿರಲ್ಲಿ ಕಾಣಿಸಿಕೊಳ್ಳುವ ಕಾರಣ ಈ ಪೂರ್ಣ ಚಂದ್ರನನ್ನು ಸೂಪರ್ ಮೂನ್ ಎಂದು ಕರೆಯುವ ಪರಿಪಾಠವನ್ನು 1979ರಲ್ಲಿ ಖಗೋಳಶಾಸ್ತ್ರಜ್ಞ ರಿಚರ್ಡ್ ನೊಲ್ಲೆ ಮೊದಲ ಬಾರಿಗೆ ಆರಂಭಿಸಿದ್ದರು. ವರ್ಷದಲ್ಲೇ ಅತ್ಯಂತ ಪ್ರಖರ ಹಾಗೂ ದೊಡ್ಡದಾಗಿ ಕಾಣುವ ಕಾರಣ ಚಂದ್ರನನ್ನು ಈ ಸ್ಥಿತಿಯಲ್ಲಿ ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.
ಚಂದ್ರ ಪ್ರಿಯರು ಚಂದ್ರನ ಚಿತ್ರಗಳನ್ನು ಸೆರೆ ಹಿಡಿದು ಟ್ವಿಟರ್, ಇನ್‌ಸ್ಟಾಗ್ರಾಂ, ಫೇಸ್ಬುಕ್ ಹಾಗೂ ರೆಡ್ಡಿಟ್‌ಗಳಲ್ಲಿ ಪೋಸ್ಟ್ ಮಾಡಿಕೊಂಡು ತಮ್ಮ ಅನುಭವವನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.